
SDPI 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ
ಮಂಗಳೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ನೆಲ, ಜಲ, ಕಾಡುಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆಯೇ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಯನ್ನೂ ಜಾರಿಗೆ ತರುತ್ತಿಲ್ಲ. ಹಿಂದೂ- ಮುಸ್ಲಿಮರ ನಡುವೆ ದ್ವೇಷ ಮೂಡಿಸಲು ಷಡ್ಯಂತ್ರ ನಡೆಸುತ್ತಿರುವ ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ಮಾತ್ರವಲ್ಲ; ಅದು ಮಾನವ ವಿರೋಧಿ. ಈ ಧೋರಣೆಗಳಿಂದಾಗಿ ದೇಶವು ಪುನಃ ಗುಲಾಮಗಿರಿಯತ್ತ ಸಾಗುವ ಅಪಾಯವಿದೆ’ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ ಹೇಳಿದರು.
ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆರನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ದೇಶದಲ್ಲಿ ವರ್ಷಕ್ಕೆ ಕಶ್ಮಲಯುಕ್ತ ನೀರು ಸೇವನೆಯಿಂದ ಸಾಯುವವರ ಪ್ರಮಾಣ 2 ಲಕ್ಷಕ್ಕೂ ಹೆಚ್ಚು ಇದೆ. ಒಟ್ಟು 146 ಕೋಟಿ ಜನಸಂಖ್ಯೆಯಲ್ಲಿ 60 ಕೋಟಿಗೂ ಹೆಚ್ಚು ಮಂದಿ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಬಡವರಿಗೆ ಸೂರು ನಿರ್ಮಿಸುವುದಕ್ಕೂ ಜಮೀನು ಸಿಗದು. ಆದರೆ, ಜಮೀನು, ಕಾಡುಗಳನ್ನು ಸರ್ಕಾರವೇ ಶ್ರೀಮಂತ ಉದ್ಯಮಿಗಳಿಗೆ ಮಾರುತ್ತಿದೆ. ವಿಮಾನ ನಿಲ್ದಾಣ, ಬಂದರು, ಹಣಕಾಸು ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮೊದಲಾದ ಸರ್ಕಾರಿ ಸಂಪತ್ತುಗಳನ್ನು ಖಾಸಗಿಯವರಿಗೆ ಬಿಕರಿ ಮಾಡುತ್ತಿದೆ. ಸರ್ವನಾಶದತ್ತ ಸಾಗುತ್ತಿರುವ ದೇಶವನ್ನು ಸಂರಕ್ಷಿಸಬೇಕಾದುದು ಪ್ರತಿಯೊಬ್ಬ ಪ್ರಜೆಯ ಹೊಣೆ’ಎಂದರು.
‘ಕೇಂದ್ರ ಸರ್ಕಾರದ ಆರಂಭಿಸಿರುವ ಸ್ಮಾರ್ಟ್ ಇಂಡಿಯಾದಿಂದ ಹಿಡಿದು ನೋಟು ರದ್ಧತಿವರೆಗಿನ ಎಲ್ಲ ಯೋಜನೆಗಳೂ ದೊಡ್ಡ ಹಗರಣಗಳು.ಶ್ರೀಮಂತ ಉದ್ಯಮಿಗಳು ತಮ್ಮ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಕಾರ್ಯಕ್ರಮಗಳವು. ಅವು ಯಾವುವೂ ಬಡ ಜನರ ಪರವಾದ ಕಾರ್ಯಕ್ರಮಗಳಲ್ಲ. ಕೇಂದ್ರದ ಯಾವುದೇ ಯೋಜನೆಯೂ ಯಶಸ್ವಿಯಾಗಿಲ್ಲ’ ಎಂದರು.
‘ದೇಶದ ವಿವಿಧ ರಾಜ್ಯಗಳಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್), ಪೌರತ್ವ ತಿದ್ದುಪಡಿ ಕಾಯ್ದೆ, ಬುಲ್ಡೋಜರ್ ನ್ಯಾಯ, ಗುಂಪು ಹಲ್ಲೆ ನಡೆಸಿ ಹತ್ಯೆ ಮೊದಲಾದ ಬೆಳವಣಿಗೆಗಳು ಕೇವಲ ಮುಸ್ಲಿಮರನ್ನು ಗುರಿಯಾಗಿಸಿವೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಈ ಬೆಳವಣಿಗೆಗಳಿಂದ ಅತೀ ಹೆಚ್ಚು ಸಮಸ್ಯೆ ಎದುರಿಸುವವರು ಬುಡಕಟ್ಟು ಜನಾಂಗಗಳಿ, ಕೂಲಿ ಕಾರ್ಮಿಕರು ಹಾಗೂ ಮಹಿಳೆಯರು. ಎಸ್‌ಐಆರ್‌ನಿಂದ ಲಕ್ಷಾಂತರ ಮಂದಿ ಮತದಾನದ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಫ್ಯಾಸಿಸ್ಟ್ ಸರ್ಕಾರದ ಇಂತಹ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು’ ಎಂದು ಹೇಳಿದರು.
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶರ್ಫುದ್ದೀನ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್, ಮೊಹಮ್ಮದ್ ಅಶ್ರಫ್, ಮೆಹರ್ ಅಫ್ರೋಝ್ ಯಾಸ್ಮೀನ್, ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಪಿ., ಕಾರ್ಯದರ್ಶಿಗಳಾದ ಅಲೋನ್ಸ್ ಫ್ರಾಂಕೊ, ತೈದುಲ್ ಇಸ್ಲಾಂ, ಜಿ.ಅಬ್ದುಲ್ ಸತ್ತಾರ್, ಮೊಹಮ್ಮದ್ ರಿಯಾಜ್, ರೂನಾ ಲೈಲಾ, ಯಾಸ್ಮಿನ್ ಇಸ್ಲಾಂ, ಶಾಹಿದಾ ತಸ್ನೀಮ್ ಮೊದಲಾದವರು ಭಾಗವಹಿಸಿದ್ದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಖಾತಿಕ್ ಸ್ವಾಗತಿಸಿದರು. ಅಶ್ರಫ್ ಅಂಕಜಾಲ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.