ADVERTISEMENT

‘ಪಾಕ್‌ ಪರ ಘೋಷಣೆ; ನಿಷ್ಪಕ್ಷಪಾತ ತನಿಖೆ ಆಗಲಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 4:01 IST
Last Updated 2 ಜನವರಿ 2021, 4:01 IST

ಮಂಗಳೂರು: ‘ಕಾರ್ಯಕರ್ತರು ಎಸ್‌ಡಿಪಿಐ ಪರ ಘೋಷಣೆ ಕೂಗಿದ್ದಾರೆಯೇ ಹೊರತು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ’ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಕಾರ್ಯದರ್ಶಿ ಅಶ್ರಫ್‌ ಮಾಚಾರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬಂಧಿತ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮೂರು ದಿನಗಳ ಬಳಿಕ ಎಸ್ಪಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲಾಗುವುದು ಎಂದರು.

ತಿರುಚಿದ ವಿಡಿಯೊದಲ್ಲಿ ಪಾಕಿಸ್ತಾನ ಪರ ಘೋಷಣೆ ಇದೆ ಎಂದು ಆರೋಪಿಸಿ ಎಸ್‌ಡಿಪಿಐನ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರ ಹಿಂದೆ ಎಸ್‌ಡಿಪಿಐ ಬೆಳವಣಿಗೆಯನ್ನು ಸಹಿಸದವರ ಷಡ್ಯಂತ್ರ ಇದೆ ಎಂದು ದೂರಿದರು.

ADVERTISEMENT

‘ಈ ಹಿಂದೆ ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ರೀತಿಯ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಿರುಚಿದ ವಿಡಿಯೊ ಪೊಲೀಸರಿಗೆ, ಮಾಧ್ಯಮಗಳಿಗೆ ಎಲ್ಲಿಂದ ಬಂದಿದೆ ಎನ್ನುವ ವಿಚಾರ ಬಹಿರಂಗವಾಗಬೇಕು. ಈ ಹಿಂದೆ ಸಂಘ ಪರಿವಾರದ ಮುಖಂಡರೊಬ್ಬರು ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಇದೇ ಸಂಘಟನೆಯ ವತಿಯಿಂದ ಈ ರೀತಿಯ ಷಡ್ಯಂತ್ರ ನಡೆಯುತ್ತಿದೆ. ಎಸ್‌ಡಿಪಿಐಗೆ ಪಾಕಿಸ್ತಾನ ಪರ ಘೋಷಣೆಯಿಂದ ಯಾವುದೇ ಲಾಭ ಇಲ್ಲ. ಈ ರೀತಿಯ ಘಟನೆ ಹಿಂದೆಯೂ ರಾಜ್ಯದ ವಿವಿಧೆಡೆ ನಡೆದಿದೆ’ ಎಂದು ಹೇಳಿದರು.

ಎಸ್‌ಡಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ರಿಯಾಝ್ ಫರಂಗಿಪೇಟೆ, ಎಸ್‌ಡಿಪಿಐ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಹೈದರ್ ನಿರ್ಸಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.