ಮಂಗಳೂರು: ಕುಡುಪುವಿನಲ್ಲಿ ಗುಂಪು ಹಲ್ಲೆಯಿಂದ ಯುವಕ ಅಶ್ರಫ್ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವರು ತಾವು ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಜೊತೆಗೆ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮಂಗಳೂರು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಒತ್ತಾಯಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆಯ ಶತ್ರು ದೇಶದ ಪರ ಜೈಕಾರ ಕೂಗಿದ ಕಾರಣಕ್ಕೆ ಆ ಯುವಕನ ಮೇಲೆ ಹಲ್ಲೆ ನಡೆದಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೇ ಅಥವಾ ಸಂಘ–ಪರಿವಾರ ಒಳಗೊಂಡ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಆರೋಪಿಗಳನ್ನು ಸಮರ್ಥಿಸುವ ರೀತಿಯ ಗೃಹ ಸಚಿವರ ಹೇಳಿಕೆಯು ಬಿಜೆಪಿಗರಿಗೆ ಮಾತನಾಡಲು ಆಹಾರ ಒದಗಿಸಿದಂತೆ ಆಗುತ್ತದೆ. ಗೃಹಸಚಿವರು ತಮ್ಮ ಹೇಳಿಕೆ ಹಿಂಪಡೆಯದಿದ್ದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರಿಸಲಿದ್ದಾರೆ’ ಎಂದರು.
‘ಸಮಾಜವಾದಿ ಸಿದ್ಧಾಂತದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಗುಂಪು ಹತ್ಯೆಯ ಬಗ್ಗೆ ಈವರೆಗೂ ಮಾತನಾಡಿಲ್ಲ. ಇಲ್ಲಿ ಉತ್ಸವಗಳಿದ್ದರೆ ಅಥವಾ ಬೇರೆ ಕಾರ್ಯಕ್ರಮಗಳಿದ್ದರೆ ವಿಮಾನ ಹತ್ತಿ ಬರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗ ಜಿಲ್ಲೆಗೆ ಬರಲು ಸಮಯ ಸಿಕ್ಕಿಲ್ಲವೇ’ ಎಂದು ಪ್ರಶ್ನಿಸಿದರು.
ಹಲ್ಲೆಯಿಂದ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಚೂಪಾದ ವಸ್ತುವಿನಿಂದ ಇರಿದಿರುವ ಗಾಯಗಳು ಇವೆ. ನಿಷ್ಕರುಣೆಯಿಂದ ಇರಿದು ಕೊಲ್ಲಲಾಗಿದೆ. ಪೆಹಲ್ಗಾಮ್‌ನಲ್ಲಿ ನಡೆದಿರುವ ದಾಳಿಗೂ ಇದಕ್ಕೂ ವ್ಯತ್ಯಾಸ ಇಲ್ಲದಂತೆ ಕಾಣುತ್ತದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಪೊಲೀಸರ ನಡೆಯ ಬಗ್ಗೆಯೂ ಸಂಶಯ ಮೂಡುವಂತಾಗಿದೆ. ತರಾತುರಿಯಲ್ಲಿ ಮೃತ ವ್ಯಕ್ತಿಯ ದೇಹವನ್ನು ಹಸ್ತಾಂತರಿಸಲಾಗಿದೆ ಎಂದರು.
ಯುವಕನ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿ ಭಾಗಿಯಾಗಿರುವ ಆರೋಪ ಇದ್ದು, ಆ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಮಂಗಳೂರು ಉತ್ತರ ಕ್ಷೇತ್ರದ ಶಾಸಕರು ಆ ವ್ಯಕ್ತಿಯ ರಕ್ಷಣೆಗೆ ನಿಂತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ರಾಜ್ಯ ಸರ್ಕಾರ ಯುವಕನ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಪ್ರಮುಖರಾದ ರಿಯಾಜ್ ಕಡಂಬು, ನಿಸಾರ್ ಅಹಮ್ಮದ್, ಸಿದ್ದೀಕ್ ಬೆಂಗ್ರೆ, ಅಕ್ಬರ್ ಕುದ್ರೋಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.