ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಏಳು ವರ್ಷ ಕಠಿಣ ಶಿಕ್ಷೆ

ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:30 IST
Last Updated 29 ಸೆಪ್ಟೆಂಬರ್ 2020, 7:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ನಗರ ಹೊರವಲಯದ ಹಾಸ್ಟೆಲ್‌ಗೆ ನುಗ್ಗಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ಹಣ ಸುಲಿಗೆ ಮಾಡಿದ ಆರೋಪಿಗೆ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಮೈಸೂರು ಕೆ.ಆರ್.ನಗರದ ನಾಗೇಶ ಅಲಿಯಾಸ್ ನಾಗು ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಧೀಶರಾದ ಸೈದುನ್ನೀಸಾ ಈ ಶಿಕ್ಷೆ ವಿಧಿಸಿದ್ದು, ಸಂತ್ರಸ್ತೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದಿಸಿದ್ದಾರೆ.

2017ರ ಡಿಸೆಂಬರ್‌ 5ರಂದು ಬೆಳಿಗ್ಗೆ 4.30 ಕ್ಕೆ ಅಪರಾಧಿ ನಾಗೇಶ್‌, ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡದ 2ನೇ ಮಹಡಿಗೆ ಇಳಿದು, ಅಲ್ಲಿ ಮಲಗಿದ್ದ ವಿದ್ಯಾರ್ಥಿನಿಯ ಕೋಣೆ ಪ್ರವೇಶಿಸಿದ್ದ. ಆಕೆಯ ಕೈ– ಕಾಲುಗಳನ್ನು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದ. ಎಟಿಎಂ ಕಾರ್ಡ್ ಹಾಗೂ ಪರ್ಸ್ ದೋಚಿ ಪರಾರಿಯಾಗಿದ್ದ. ಪರ್ಸ್‌ನಲ್ಲಿ ₹3ಸಾವಿರ ಇತ್ತು. ಎಟಿಎಂನಿಂದ ₹8ಸಾವಿರ ತೆಗೆದಿದ್ದ. 3ನೇ ಮಹಡಿಯಲ್ಲಿ ಮಲಗಿದ್ದ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಕೂಡ ಎಗರಿಸಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಕಟ್ಟಡದಲ್ಲಿದ್ದ ಆರೋಪಿಯ ಬೆರಳಚ್ಚು ಹಾಗೂ ನಗರದ ಎರಡು ಎಟಿಎಂಗಳಲ್ಲಿ ಆತ ಹಣ ಪಡೆಯಲು ಹೋಗಿದ್ದಾಗ ಅಲ್ಲಿನ ಸಿಸಿಟಿವಿಗಳಲ್ಲಿ ದಾಖಲಾಗಿದ್ದ ದೃಶ್ಯಗಳು ತನಿಖೆಗೆ ಸಹಕಾರಿಯಾಗಿದ್ದವು. 2017ರ ಡಿಸೆಂಬರ್‌ 10ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 25 ಮಂದಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಉಳ್ಳಾಲ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ ತನಿಖಾಧಿಕಾರಿಯಾಗಿದ್ದರು. ನಂತರ ಡಿಸಿಪಿ ಉಮಾ ಪ್ರಶಾಂತ್ ಅವರು ಹೆಚ್ಚಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ಹಾಸ್ಟೆಲ್‌ಗೆ ಅಕ್ರಮ ಪ್ರವೇಶ ಮಾಡಿರುವುದಕ್ಕೆ 7 ವರ್ಷಗಳ ಕಠಿಣ ಶಿಕ್ಷೆ ಮತ್ತು ₹10ಸಾವಿರ ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ, ಸುಲಿಗೆಗೆ 5 ವರ್ಷ ಕಠಿಣ ಸಜೆ, ₹5ಸಾವಿರ ದಂಡ, ದಂಡ ಪಾವತಿಗೆ ತಪ್ಪಿದರೆ ಹೆಚ್ಚುವರಿ 1 ವರ್ಷ ಸಾದಾ ಶಿಕ್ಷೆ, ರಾಡ್ ಹಿಡಿದು ಬೆದರಿಕೆ ಹಾಕಿರುವುದಕ್ಕೆ 7 ವರ್ಷಗಳ ಕಠಿಣ ಶಿಕ್ಷೆ, ₹10ಸಾವಿರ ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಸಜೆ, ಲೈಂಗಿಕ ದೌರ್ಜನ್ಯ ನಡೆಸಿರುವುದಕ್ಕೆ 5 ವರ್ಷ ಕಠಿಣ ಸಜೆ, ₹5ಸಾವಿರ ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ. ಈ ಎಲ್ಲ ಶಿಕ್ಷೆಗಳನ್ನು ಏಕಕಾಲಕ್ಕೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.