ADVERTISEMENT

ಶಕ್ತಿನಗರ ಶ್ರೀಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ ಮಾರ್ಚ್‌ 1ರಿಂದ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 5:03 IST
Last Updated 27 ಫೆಬ್ರುವರಿ 2025, 5:03 IST

ಮಂಗಳೂರು: ರಜತ ಮಹೋತ್ಸವದ ಪ್ರಯುಕ್ತ ಜೀರ್ಣೋದ್ಧಾರಗೊಂಡಿರುವ ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಮಾರ್ಚ್ 1ರಿಂದ 4 ರವರೆಗೆ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಏಕಾಹ ಭಜನೆ ಹಮ್ಮಿಕೊಳ್ಳಲಾಗಿದೆ ಎಂದು ರಜತ ಮಹೋತ್ಸವ ಸಮಿತಿ ಸಂಚಾಲಕ ಹರೀಶ್ ಕುಮಾರ್ ಜೋಗಿ ತಿಳಿಸಿದರು.

ಇಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಾರ್ಚ್ 2 ರಂದು ಬೆಳಗ್ಗೆ 11.25ಕ್ಕೆ ಶ್ರೀಕೃಷ್ಣ ದೇವರ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಸಂಜೆ 6ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಿ.ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಭಾಗವಹಿಸುವರು. ರಾತ್ರಿ 9 ರಿಂದ ಶ್ರೀಏಕಾದಶಿ ದೇವಿ ಮಹಾತ್ಮೆ ಯಕ್ಷಗಾನವಿದೆ’ ಎಂದರು.

ಮಾರ್ಚ್ 3 ರಂದು ಬೆಳಿಗ್ಗೆ 6.45ರಿಂದ ಅಹೋರಾತ್ರಿ ಹರಿನಾಮ ಸಂಕೀರ್ತನೆಯೊಂದಿಗೆ ಏಕಾಹ ಭಜನೋತ್ಸವ ನೆರವೇರಲಿದ್ದು, 25 ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ. ಮಾರ್ಚ್‌ 4ರಂದು ಬೆಳಗ್ಗೆ 10 ರಿಂದ 12 ರವರೆಗೆ ಕರೋಕೆ ಭಕ್ತಿ ಸಂಗೀತ, ಮಧ್ಯಾಹ್ನ 12ಕ್ಕೆ ಶ್ರೀಕೃಷ್ಣ ದೇವರ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6ಕ್ಕೆ ಆನಂದ ಪೂಜೆ, ರಾತ್ರಿ 8 ರಿಂದ ‘ಶ್ರೀ ಕೃಷ್ಣ ಲೀಲಾಮೃತ’ ತಾಳಮದ್ದಳೆ ಜರುಗಲಿದೆ ಎಂದರು.

ADVERTISEMENT

ಮಾರ್ಚ್‌ 1 ರಂದು ಸಂಜೆ 3ರಿಂದ ಶಕ್ತಿನಗರದ ಮುತ್ತಪ್ಪ ಗುಡಿ ವಠಾರದಿಂದ ಹೊರೆಕಾಣಿಕೆ ಮೆರವಣಿಗೆಯು ಹೊರಡಲಿದ್ದು, ನೂತನ ಸ್ವರ್ಣ ಕಿರೀಟ ಹಾಗೂ ಪ್ರಭಾವಳಿಯೊಂದಿಗೆ ಮಂದಿರದವರೆಗೆ ಸಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಜತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ, ಉಪಾಧ್ಯಕ್ಷ ಕೇಶವ ಎಸ್., ಪ್ರಚಾರ ಸಂಚಾಲಕ ರವಿಚಂದ್ರ, ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಕುಂದರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.