ADVERTISEMENT

ಶಿವಮೊಗ್ಗದ ಬದಲು ಬೈಂದೂರಿನಲ್ಲಿ ಕಂಬಳ 

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 15:37 IST
Last Updated 26 ಮಾರ್ಚ್ 2025, 15:37 IST
ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಬುಧವಾರ ನಡೆದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್ ಭಾಗವಹಿಸಿದ್ದರು
ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಬುಧವಾರ ನಡೆದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್ ಭಾಗವಹಿಸಿದ್ದರು   

ಮೂಡುಬಿದಿರೆ: ಶಿವಮೊಗ್ಗದಲ್ಲಿ ಏಪ್ರಿಲ್ 19ರಂದು ಕಂಬಳ ನಡೆಸಲು ನಿರ್ಧರಿಸಿದ್ದರೂ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಶಿವಮೊಗ್ಗ ಕಂಬಳವನ್ನು ರದ್ದುಪಡಿಸಿ ಅದೇ ದಿನದಂದು ಬೈಂದೂರಿನಲ್ಲಿ ಕಂಬಳ ನಡೆಸಲು ನಿರ್ಧರಿಸಲಾಯಿತು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸೃಷ್ಟಿ ಗಾರ್ಡನ್‌ನಲ್ಲಿ ಬುಧವಾರ ಈ ಕುರಿತು ಸಭೆ ನಡೆಯಿತು.

ಜಿಲ್ಲೆಯಲ್ಲಿ ಈ ವರ್ಷದ ಕಂಬಳಗಳು ಮುಕ್ತಾಯದ ಹಂತದಲ್ಲಿದ್ದು, ಮೂರ್ನಾಲ್ಕು ಕಂಬಳಗಳು ಮಾತ್ರ ಬಾಕಿ ಉಳಿದಿವೆ. ಈ ಹಿಂದಿನ ಒಂದೆರಡು ಕಂಬಳಗಳಲ್ಲಿ ಗೊಂದಲ ಉಂಟಾಗಿದ್ದು, ಇಂತಹ ಘಟನೆಗಳು ಮುಂದಿನ ಕಂಬಗಳಲ್ಲಿ ಪುನರಾವರ್ತನೆಯಾಗದಂತೆ ಕಂಬಳದ ತೀರ್ಪುಗಾರರು, ಯಜಮಾನರು ಸಹಕರಿಸಲು ಕೋರಲಾಯಿತು. ಈ ಕಂಬಳಗಳನ್ನು ಗೊಂದಲರಹಿತವಾಗಿ ನಡೆಸುವ ಕುರಿತು ಜಿಲ್ಲಾ ಕಂಬಳ ಸಮಿತಿ ಚರ್ಚಿಸಿತು.

ADVERTISEMENT

ಕಂಬಳ ತೀರ್ಪುಗಾರರು ಮತ್ತು ಸೆನ್ಸಾರ್ ನಿರ್ವಾಹಕರು ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಪು ನೀಡಬೇಕು. ತೀರ್ಪಿನಲ್ಲಿ ಯಾವುದೇ ಗೊಂದಲ ಆಗದಂತೆ ಎಚ್ಚರ ವಹಿಸಬೇಕು. ಕೋಣಗಳನ್ನು ಸಮಯಕ್ಕೆ ಸರಿಯಾಗಿ ಬಿಡುವ ಮೂಲಕ ಕಂಬಳವನ್ನು ಕಾಲಮಿತಿಯೊಳಗೆ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.

ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಕೋಣಗಳ ಯಜಮಾನರಾದ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ಉದಯ ಎಸ್. ಕೋಟ್ಯಾನ್, ತ್ರಿಶಾಲ್ ಎ. ಪೂಜಾರಿ, ಓಟಗಾರರಾದ ಶ್ರೀನಿವಾಸ್ ಗೌಡ, ರಿತೇಶ್ ಒಂಟಿಕಟ್ಟೆ, ರಾಜೇಶ್ ಮಾರ್ನಾಡು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳಾದ ಚಂದ್ರಹಾಸ ಸನಿಲ್, ವಿಜಯ್ ಕುಮಾರ್ ಕಂಗಿನಮನೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.