ADVERTISEMENT

ತೈಲ ಸೋರಿಕೆ ಭೀತಿ: ಡ್ರೆಜ್ಜರ್‌ ಬೀಚ್‌ಗೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 15:23 IST
Last Updated 29 ಅಕ್ಟೋಬರ್ 2019, 15:23 IST
ಭಗವತಿ ಪ್ರೇಮ್‌ ಡ್ರೆಜ್ಜರ್‌ ಅನ್ನು ಸುರತ್ಕಲ್‌ ಬೀಚ್‌ ಪ್ರದೇಶಕ್ಕೆ ತಂದು ನಿಲ್ಲಿಸಿರುವುದು
ಭಗವತಿ ಪ್ರೇಮ್‌ ಡ್ರೆಜ್ಜರ್‌ ಅನ್ನು ಸುರತ್ಕಲ್‌ ಬೀಚ್‌ ಪ್ರದೇಶಕ್ಕೆ ತಂದು ನಿಲ್ಲಿಸಿರುವುದು   

ಮಂಗಳೂರು: ಅಳಿವೆ ಬಾಗಿಲಿನ ಹೂಳು ತೆಗೆಯುವ ಕಾಮಗಾರಿಗೆ ಮುಂಬೈನ ಮೆಕ್ರೇಟರ್‌ ಕಂಪನಿ ತಂದು ಸಮುದ್ರದಲ್ಲೇ ಬಿಟ್ಟು ಹೋಗಿರುವ ಭಗವತಿ ಪ್ರೇಮ್‌ ಹೆಸರಿನ ಡ್ರೆಜ್ಜರ್‌ನಿಂದ ತೈಲ ಸೋರಿಕೆ ಭೀತಿ ಎದುರಾಗಿದ್ದು, ಅದನ್ನು ಮಂಗಳವಾರ ಸುರತ್ಕಲ್‌ನ ಬೀಚ್‌ ಪ್ರದೇಶಕ್ಕೆ ಎಳೆದು ತಂದು ನಿಲ್ಲಿಸಲಾಗಿದೆ.

ಭಗವತಿ ಪ್ರೇಮ್‌ ಡ್ರೆಜ್ಜರ್‌ ಅನ್ನು ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳಿಲ್ಲದೇ ನವ ಮಂಗಳೂರು ಬಂದರು ವ್ಯಾಪ್ತಿಯ ಸಮುದ್ರದಲ್ಲಿ ನಿಲ್ಲಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ನೀಡಿದ್ದ ಸೂಚನೆಗಳನ್ನು ಮೆಕ್ರೇಟರ್‌ ಕಂಪನಿ ಪಾಲಿಸಿರಲಿಲ್ಲ.

‘ಸೋಮವಾರ ಬೆಳಿಗ್ಗೆ ಎನ್‌ಎಂಪಿಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದ ಡ್ರೆಜ್ಜರ್‌ನ ಕ್ಯಾಪ್ಟನ್‌, ಡ್ರೆಜ್ಜರ್‌ನಲ್ಲಿ ತೈಲ ಸೋರಿಕೆಯ ಅಪಾಯ ಎದುರಾಗಿದೆ. ನೌಕೆ ಲಂಗರು ಹಗ್ಗ ತುಂಡರಿಸಿಕೊಂಡು ಸಮುದ್ರದ ಆಳ ಪ್ರದೇಶದತ್ತ ಹೋಗುತ್ತಿದೆ. ಮುಳುಗಿದರೆ ತೈಲ ಸೋರಿಕೆ ಸಂಭವಿಸುವ ಅಪಾಯವಿದೆ ಎಂದು ಮಾಹಿತಿ ನೀಡಿದ್ದರು. ತಕ್ಷಣವೇ ಎನ್‌ಎಂಪಿಟಿಯ ಉಪ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ನಮ್ಮ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು’ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ ತಿಳಿಸಿದ್ದಾರೆ.

ADVERTISEMENT

ತಕ್ಷಣವೇ ಎನ್‌ಎಂಪಿಟಿ ಅಧಿಕಾರಿಗಳು ಹೆಚ್ಚುವರಿ ಪಂಪ್‌ಗಳು, ಬಾರ್ಜ್‌ಗಳು ಮತ್ತು ಟಗ್‌ಗಳೊಂದಿಗೆ ಡ್ರೆಜ್ಜರ್‌ ಏರಿದ್ದರು. ನೌಕೆಯ ತಳಭಾಗಕ್ಕೆ ಹಾನಿಯಾಗಿರುವುದು ಪರಿಶೀಲನೆ ವೇಳೆ ಕಂಡುಬಂತು. ಆಳ ಸಮುದ್ರದಲ್ಲಿ ಅದನ್ನು ನಿಲ್ಲಿಸಿದರೆ ಮುಳುಗಿ, ತೈಲ ಸೋರಿಕೆ ಉಂಟಾಗುವ ಅಪಾಯವಿದೆ ಎಂಬುದನ್ನು ಗಮನಿಸಲಾಯಿತು. ಈ ಕಾರಣದಿಂದ ನೌಕೆಯನ್ನು ಬೀಚ್‌ ಪ್ರದೇಶಕ್ಕೆ ಎಳೆದು ತರಲು ನಿರ್ಧರಿಸಲಾಯಿತು. ಅದರಂತೆ ಸುರತ್ಕಲ್‌ ಕಡಲ ತೀರಕ್ಕೆ ಎಳೆದು ತಂದು ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಸಮುದ್ರದಲ್ಲಿನ ಜಲಚರಗಳ ಜೀವಕ್ಕೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಬಂದರಿನ ವ್ಯಾಪ್ತಿಯ ಪ್ರದೇಶವನ್ನು ಸುರಕ್ಷಿತವಾಗಿ ಇರಿಸುವ ದೃಷ್ಟಿಯಿಂದ ಇದು ಮಹತ್ವದ ಕಾರ್ಯಾಚರಣೆ’ ಎಂದು ರಮಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.