ADVERTISEMENT

ತೈಲ ತೆರವು: ಸ್ಪಂದಿಸದ ಮಾಲೀಕ, ಜಿಲ್ಲಾಡಳಿತಕ್ಕೆ ತಲೆನೋವು

ಉಚ್ಚಿಲ ಬಳಿ ಅರಬ್ಬೀಸಮುದ್ರದಲ್ಲಿ ಮುಳುಗುತ್ತಿರುವ ‘ಪ್ರಿನ್ಸೆಸ್‌ ಮಿರಾಲ್’ ಹಡಗು

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 7:05 IST
Last Updated 25 ಜೂನ್ 2022, 7:05 IST

ಮಂಗಳೂರು: ಬಟ್ಟಪ್ಪಾಡಿ ಸಮೀಪ ಅರಬ್ಬೀಸಮುದ್ರದಲ್ಲಿ ಮುಳುಗುತ್ತಿರುವ ‘ಪ್ರಿನ್ಸೆಸ್‌ ಮಿರಾಲ್‌’ ಹಡಗಿನಿಂದ ಇಂಧನ ಹೊರತೆಗೆಯುವುದಕ್ಕೆ, ಅದರ ಮಾಲೀಕರು ಸ್ಪಂದಿಸದೇ ಇರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

‘ಹಡಗಿನಿಂದ ಇದುವರೆಗೆ ತೈಲ ಸೋರಕೆ ಆಗಿಲ್ಲ.ಸಿರಿಯಾ ಮೂಲದ ವ್ಯಕ್ತಿಯೊಬ್ಬರು ಈ ಹಡಗಿನ ಮಾಲೀಕ. ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ತೈಲ ಹೊರತೆಗೆಯಲು ಪ್ರಾಥಮಿಕ ಸರ್ವೆ ನಡೆಸಲು ಬಂದ ಸಿಂಗಪುರದ ಸ್ಮಿತ್‌ ಎಕ್ಸ್‌ಪರ್ಟ್‌ ಕಂಪನಿಯವರು ಪ್ರತೀಕೂಲ ಹವಾಮಾನದಿಂದಾಗಿ ಕೆಲಸ ಮುಂದುವರಿಸಲು ಸಾಧ್ಯವಾಗಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹಡಗಿನಿಂದ ತೈಲವನ್ನು ಹೊರಗೆ ತೆಗೆಯಲು ಮಾಲೀಕರು ಸ್ಪಂದಿಸದೇ ಹೋದರೆ, ಬೇರೆ ವ್ಯವಸ್ಥೆ ಮಾಡಬೇಕಾಗುತ್ತದೆ. ಈಗ ಎದುರಿರಾಗಿರುವ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆ ನೌಕಾಯಾನ ಇಲಾಖೆಯ ಮಹಾನಿರ್ದೇಶಕರ ಜೊತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ತೈಲ ಸೋರಿಕೆಯಿಂದ ಸಮುದ್ರ ಮಾಲಿನ್ಯ ಉಂಟಾಗುವ ಪ್ರಮೇಯ ಎದುರಾದರೆ, ಅಂತಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರವು ಮಾದರಿ ಕಾರ್ಯವಿಧಾನವನ್ನು 2015ರಲ್ಲಿ ರೂಪಿಸಿದೆ. ಅದರ ಮಾರ್ಗಸೂಚಿಗಳ ಅನ್ವಯ ಕೆಲವು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಪರಿಸ್ಥಿತಿ ನಿಭಾಯಿಸುವುದಕ್ಕೆ ಕರಾವಳಿ ರಕ್ಷಣಾ ಪಡೆಯನ್ನು ನೋಡಲ್‌ ಏಜನ್ಸಿಯನ್ನಾಗಿ ಹಾಗೂ ಕರಾವಳಿ ರಕ್ಷಣಾ ಪಡೆಯ ಡಿಐಜಿ ಅವರನ್ನು ಇನ್ಸಿಡೆಂಟ್‌ ಕಮಾಂಡರ್‌ ಆಗಿ ನೇಮಿಸಲಾಗಿದೆ’ ಎಂದರು.

‘ಹಡಗಿನಲ್ಲಿ 220 ಟನ್‌ಗಳಷ್ಟು ತೈಲವಿದೆ. ಅದು ಸೋರಿಕೆ ಆಗದಂತೆ ತಡೆಯುವುದೇ ನಮ್ಮ ಸದ್ಯದ ಉದ್ದೇಶ. ಹಡಗಿನಲ್ಲಿ 8 ಸಾವಿರ ಟನ್‌ಗಳಷ್ಟು ಉಕ್ಕಿನ ಕಾಯಿಲ್‌ಗಳಿವೆ. ಹಡಗು ಮುಳುಗಿದರೂ ಉಕ್ಕಿನ ಕಾಯಿಲ್‌ಗಳಿಂದ ಯಾವುದೇ ಆತಂಕ ಇಲ್ಲ. ಅದನ್ನು ನಂತರವೂ ಹೊರಗೆ ತೆಗಯಬಹುದು’ ಎಂದು ತಿಳಿಸಿದರು.

ಪೋರಬಂದರಿನಿಂದ ಹೊರಟ ‘ಸಮುದ್ರ ಪಾವಕ್‌’
‘ಮುಳುಗುತ್ತಿರುವ ಪ್ರಿನ್ಸೆಸ್‌ ಮಿರಾಲ್ ಹಡಗಿನಲ್ಲಿರುವ ತೈಲವನ್ನು ಹೊರಗೆ ತೆಗೆಯುವುದಕ್ಕೆ ಮಾಲಿನ್ಯ ನಿಯಂತ್ರಣಾ ಹಡಗು ಸಮುದ್ರ ಪಾವಕ್‌ ಗುಜರಾತಿನ ಪೋರಬಂದರಿನಿಂದ ಹೊರಟಿದೆ. ಅದು ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಮಂಗಳೂರು ತಲುಪುವ ನಿರೀಕ್ಷೆ ಇದೆ’ ಎಂದು ಕರಾವಳಿ ರಕ್ಷಣಾ ಪಡೆಯ ಡಿಐಜಿ ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*
ಪ್ರಿನ್ಸೆಸ್‌ ಮಿರಾಲ್‌ ಹಡಗು ಇನ್ನೂ ಪೂರ್ತಿ ಮುಳುಗಿಲ್ಲ. ಇದುವರೆಗೆ ಹಡಗಿನಿಂದ ಯಾವುದೇ ತೈಲ ಸೋರಿಕೆ ಆಗಿಲ್ಲ. ತೈಲವನ್ನು ಸುರಕ್ಷಿತವಾಗಿ ಹೊರಗೆ ತೆಗೆಯುವುದಕ್ಕೆ ಸರ್ವ ಪ್ರಯತ್ನ ಮಾಡುತ್ತಿದ್ದೇವೆ
-ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.