ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ
ಮಂಗಳೂರು: ‘ಶಿರೂರು– ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಗುಡ್ಡ ಕುಸಿದು ಜುಲೈ 16ರಂದು ಮೃತಪಟ್ಟ 8 ಮಂದಿಯಲ್ಲಿ ಆರು ಮಂದಿ ಈಡಿಗ ಮತ್ತು ನಾಮಧಾರಿ ಸಮುದಾಯದವರು. ಸರ್ಕಾರದ ಪ್ರತಿನಿಧಿಗಳು ಯಾರೂ ಈ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ’ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಇಂತಹ ದುರಂತ ಸಂಭವಿಸಿದಾಗ ಜಾತಿಯ ವಿಚಾರ ಎತ್ತಬಾರದು. ಆದರೂ, ಸರ್ಕಾರ ಅಂತಹ ಸ್ಥಿತಿಯನ್ನು ಸೃಷ್ಟಿಸಿದೆ. ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ್, ಶಾಂತಿ, ರೋಷನ್ ಹಾಗೂ ಅವಂತಿಕಾ ಎಂಬುವರು ಸತ್ತಿದ್ದರೂ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರೂ ಅವರ ಕಣ್ಣೊರೆಸಲು ಮುಂದಾಗಿಲ್ಲ. ಈ ಕುಟುಂಬದಲ್ಲಿ ಮೂವರು ಹೆಣ್ಣು ಮಕ್ಕಳಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಸ್ಥಿತಿಯಲ್ಲಿ ಕುಟುಂಬವಿದೆ. ಮಾಲ್‌ಗೆ ತೆರಳಿದ ರೈತನಿಗೆ ಪ್ರವೇಶ ನಿರಾಕರಿಸಿದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಆದರೆ ದುರಂತದಲ್ಲಿ 8 ಮಂದಿ ಅಸುನೀಗಿದರೂ 5 ನಿಮಿಷ ಶ್ರದ್ಧಾಂಜಲಿ ಸಲ್ಲಿಸುವ ಸೌಜನ್ಯವನ್ನೂ ಸರ್ಕಾರ ತೋರಿಸಿಲ್ಲ. ಮೃತರಲ್ಲಿ ಹೆಚ್ಚಿನವರು ಹಿಂದುಳಿದ ವರ್ಗದ ನಾಮಧಾರಿ ಸಮಾಜಕ್ಕೆ ಸೇರಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದ್ದರು.
‘ಕೇರಳದ ಲಾರಿ ಚಾಲಕ ಅರ್ಜುನ ಅವರ ರಕ್ಷಣಾ ಕಾರ್ಯದ ಸಲುವಾಗಿ ಕೇರಳ ಸರ್ಕಾರ ಪ್ರತಿನಿಧಿಗಳನ್ನು ಕಳುಹಿಸಿದೆ. ಆದರೆ ಉತ್ತರ ಕನ್ನಡ ಜಿಲ್ಲಾಡಳಿತ ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸಿಲ್ಲ’ ಎಂದು ದೂರಿದರು.
’ಕಾಮಗಾರಿಯನ್ನು ನಿರ್ವಹಿಸಿದ ಐಆರ್‌ಬಿ ಕಂಪನಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ನಿರ್ವಹಿಸದಿರುವುದೇ ಈ ಅವಘಡಕ್ಕೆ ಕಾರಣ. ಈ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಇಲ್ಲಿ ಹೆದ್ದಾರಿ ಪಕ್ಕದ ಗುಡ್ಡಗಳ ಲೋಡ್‌ಗಟ್ಟಲೆ ಕಲ್ಲುಗಳನ್ನು ಬೇರೆ ರಾಜ್ಯಗಳಿಗೆ ಸಾಗಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ದುರಂತಕ್ಕೆ ಕೇಂದ್ರ ಸರ್ಕಾರವೂ ಹೊಣೆ. ಹೆದ್ದಾರಿ ಕಾಮಗಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಬಗ್ಗೆ ಲೋಕಸಭಾ ಅಧಿವೇಶನದಲ್ಲೂ ಚರ್ಚೆ ನಡೆಯಬೇಕು’ ಎಂದರು.
‘ಐಆರ್‌ಬಿ ಕಂಪನಿಯ ಮಾಲೀಕ ಹಾಗೂ ಎಂಟು ಮಂದಿ ನಿರ್ದೇಶಕರ ವಿರುದ್ಧ ನಾನು ಅಂಕೋಲಾ ಠಾಣೆಗೆ ದೂರು ನೀಡಿದ್ದೇನೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಈ ಕಂಪನಿಗೆ ಗುತ್ತಿಗೆ ಪಡೆದು ನಿರ್ವಹಿಸುತ್ತಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಸಂತ್ರಸ್ತ ಕುಟುಂಬಗಳಿಗೆ ಕಂಪನಿಯಿಂದ ತಲಾ ₹1 ಕೋಟಿ ಪರಿಹಾರ ಕೊಡಿಸಬೇಕು. ಆ ಕುಟುಂಬದ ಒಬ್ಬರಿಗೆ ಕಂಪನಿಯಲ್ಲಿ ಉದ್ಯೋಗ ಕೊಡಿಸಬೇಕು. ಈ ಹೆದ್ದಾರಿ ಪಕ್ಕದಲ್ಲಿ ಇನ್ನೂ ಅನೇಕ ಕಡೆ ಗುಡ್ಡ ಕಡಿಯಲಾಗಿದ್ದು, ಅಲ್ಲೂ ದುರಂತ ಸಂಭವಿಸುವ ಅಪಾಯವಿದೆ. ಇದನ್ನು ತಪ್ಪಿಸಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ಈ ನಿರ್ಲಕ್ಷ್ಯವನ್ನು ಖಂಡಿಸಿ ಭಾರಿ ಪ್ರತಿಭಟನೆಯನ್ನು ಕೈಗೊಳ್ಳಲಿದ್ದೇವೆ. ಈ ಬಗ್ಗೆ ಚರ್ಚಿಸಲು ಇದೇ 28ರಂದು ಅಂಕೋಲಾ ನಾಮಧಾರಿ ಸಮುದಾಯ ಭವನದಲ್ಲಿ ಸಭೆ ನಡೆಸಲಿದ್ದು, ನಾಮಾಧಾರಿ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.