ADVERTISEMENT

ಪೂಜೆಯಲ್ಲಿ ತಲ್ಲೀನ; ಶಿವನ ಧ್ಯಾನ

ಜಿಲ್ಲೆ, ಮಂಗಳೂರು ನಗರದ ದೇವಾಲಯಗಳಲ್ಲಿ ಮೊಳಗಿದ ನಾಮಸ್ಮರಣೆ: ರಥೋತ್ಸವದ ವೈಭವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 5:00 IST
Last Updated 27 ಫೆಬ್ರುವರಿ 2025, 5:00 IST
ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಶಿವಲಿಂಗಕ್ಕೆ ಭಕ್ತರು ಅಭಿಷೇಕ ಮಾಡಿದರು‌ : ಪ್ರಜಾವಾಣಿ ಚಿತ್ರ
ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಶಿವಲಿಂಗಕ್ಕೆ ಭಕ್ತರು ಅಭಿಷೇಕ ಮಾಡಿದರು‌ : ಪ್ರಜಾವಾಣಿ ಚಿತ್ರ   

ಮಂಗಳೂರು: ವಿಶೇಷ ಪೂಜೆ, ಅಭಿಷೇಕ, ನಾಮಸ್ಮರಣೆ ಮುಂತಾದ ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲೆಯ ಶಿವಾಲಯಗಳಲ್ಲಿ ಬುಧವಾರ ವಿಶಿಷ್ಟ ವಾತಾವರಣ ಸೃಷ್ಟಿಸಿದವು. ಶಿವರಾತ್ರಿ ಅಂಗವಾಗಿ ಉಪವಾಸ ವ್ರತ ಹಿಡಿದ ಭಕ್ತರು ದೇವಾಲಯಗಳ ಭೇಟಿ, ಪೂಜಾದಿ ಕರ್ಮಗಳಲ್ಲಿ ಪಾಲ್ಗೊಂಡು ಧನ್ಯರಾದರು.

ನಗರದ ಕದ್ರಿ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವರಾತ್ರಿ ಸಂಭ್ರಮ ಹೆಚ್ಚಾಗಿತ್ತು. ಕದ್ರಿ ದೇವಸ್ಥಾನ ದಿನವಿಡೀ ಭಕ್ತರಿಂದ ಕಿಕ್ಕಿರಿದಿತ್ತು. ಕುದ್ರೋಳಿಯಲ್ಲಿ ಸಂಜೆ ನಡೆದ ರಥೋತ್ಸವದ ವೈಭವ ಸಾವಿರಾರು ಜನರನ್ನು ಪುಳಕಗೊಳಿಸಿತು. ಇದಕ್ಕೂ ಮೊದಲು ಶಹನಾಯ್‌ ವಾದನ, ವಿವಿಧ ತಂಡಗಳ ಭರತನಾಟ್ಯ ಮತ್ತು ಇತರ ವೈವಿಧ್ಯಮಯ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನ ತಣಿಸಿತು. 

ವಿದ್ಯುತ್‌ ದೀಪಗಳಿಂದ ಅಲಂಕರಿಸಿ, ತೋರಣ ಕಟ್ಟಿ ಸಿಂಗರಿಸಲಾಗಿದ್ದ ದೇವಾಲಯಗಳಲ್ಲಿ ಬುಧವಾರ ಬೆಳಿಗ್ಗೆಯೇ ಶಿವನಾಮ ಸ್ಮರಣೆ ಮೊಳಗಲು ಶುರುವಾಗಿತ್ತು. ಕದ್ರಿಯಲ್ಲಿ ಬೆಳಿಗ್ಗೆ ಆರು ಗಂಟೆಗೆ ಮೊದಲ ಜಾಮ ಪೂಜೆ ನಡೆಯಿತು. ನಂತರ ಮೂರು ಜಾಮ ಪೂಜೆಗಳು ಇದ್ದವು. ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದ ಭಕ್ತರು ಸಂಜೆ ಮಹಾಪೂಜೆಯಲ್ಲಿ ಪಾಲ್ಗೊಂಡು ಹರ್ಷೋದ್ಗಾರ ಮಾಡಿದರು. ದೇವಾಲಯದ ಆವರಣದ ವೇದಿಕೆಯಲ್ಲಿ ದಿನವಿಡೀ ವಿವಿಧ ತಂಡಗಳಿಂದ ಭಜನೆ ನೆರವೇರಿತು. ರುದ್ರಾಭಿಷೇಕದಲ್ಲೂ ಭಕ್ತರು ಪಾಲ್ಗೊಂಡರು. ರಾತ್ರಿ ಜಾಗರಣೆಗೂ ವ್ಯವಸ್ಥೆ ಮಾಡಲಾಗಿತ್ತು. 

ADVERTISEMENT

ಶರವು ಮಹಾಗಣಪತಿ ದೇವಾಲಯದ ಆವರಣದಲ್ಲಿರುವ ಶರಭೇಶ್ವರ ದೇಗುಲದ ಶಿವನಿಗೆ ಕೈಮುಗಿಯಲು ಕೂಡ ಭಕ್ತರ ದಂಡೇ ಬಂದಿತ್ತು. ಶ್ರೀ ಗುರುರಾಘವೇಂದ್ರ ಮಠದ ಸಮೀಪದಲ್ಲಿರುವ ತ್ರಿಲಿಂಗೇಶ್ವರ ದೇವಾಲಯ, ಬೈಕಂಪಾಡಿ ಪೇಜಾವರ ಮಠ ಸಮೀಪದ ಬಬ್ರುಗುಡ್ಡೆ ದೇವಸ್ಥಾನ, ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು. 

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಂಗಳೂರು ಘಟಕ ಶಿವರಾತ್ರಿ ಅಂಗವಾಗಿ ಕದ್ರಿ ಮೈದಾನದಲ್ಲಿ ಆಯೋಜಿಸಿರುವ ಸಹಸ್ರ ಲಿಂಗ ದರ್ಶನ, ಶಿವಧ್ಯಾನ ಶಿಬಿರ ಮತ್ತು ಅಧ್ಯಾತ್ಮಿಕ ಚಿತ್ರ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದಕ್ಕೂ ಭಕ್ತರು ಉತ್ಸುಕರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.