ADVERTISEMENT

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿದವರಿಗೆ ಗುಂಡಿಕ್ಕಿ: ಯತ್ನಾಳ್‌

​ಪ್ರಜಾವಾಣಿ ವಾರ್ತೆ
Published 3 ಮೇ 2025, 0:16 IST
Last Updated 3 ಮೇ 2025, 0:16 IST
ಬಸನಗೌಡ ಪಾಟೀಲ ಯತ್ನಾಳ್‌
ಬಸನಗೌಡ ಪಾಟೀಲ ಯತ್ನಾಳ್‌   

ಮಂಗಳೂರು: ‘ಹಿಂದೂ ಧರ್ಮವನ್ನು ಉಳಿಸಲು ಹೋರಾಡುವವರನ್ನು ಮುಸ್ಲಿಂ ಭಯೋತ್ಪಾದಕರು ಕೊಂದು ಹಾಕುತ್ತಿದ್ದಾರೆ. ಆರೋಪಿಗಳು ಎಲ್ಲಿ ಸಿಗುತ್ತಾರೋ ಅಲ್ಲೇ ಗುಂಡಿಕ್ಕಿ ಸಾಯಿಸಬೇಕು. ಇಲ್ಲದಿದ್ದರೆ  ದೇಶಕ್ಕಾಗಿ ದುಡಿಯುವವರಿಗೆ ಭಯಪಡುವ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುಹಾಸ್‌ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು ಸಂತ್ರಸ್ತ ಕುಟುಂಬಕ್ಕೆ ₹ 5 ಲಕ್ಷ  ನೀಡುವುದಾಗಿ ತಿಳಿಸಿದರು.

‘ಕೆಲವರು ಹಿಂದೂ ಹೆಸರಿನಲ್ಲಿ ಮಜಾ ಮಾಡಿದ್ದಾರೆ. ಕಾರ್ಯಕರ್ತರ ಹೆಸರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ‘ನಮ್ಮ ಸರ್ಕಾರ  ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿ ಸುಮ್ಮನೆ ಕುಳಿತರು. ಈಗ ಬಂದು ಸಾಂತ್ವನ ಹೇಳುತ್ತಾರೆ‌’ ಎಂದು ಕಿಡಿಕಾರಿದರು.

ADVERTISEMENT

‘ಹಿಂದೂ ಯುವಕರು ರಾತ್ರಿ ಹೊತ್ತು ಒಬ್ಬಂಟಿಯಾಗಿ ಓಡಾಡಬೇಡಿ. ನಮ್ಮ ಸರ್ಕಾರದ ಇದ್ದಾಗಲೂ ಕಾರ್ಯಕರ್ತರಿಗೆ ರಕ್ಷಣೆ‌ ‌ಇರಲಿಲ್ಲ. ಕರಾವಳಿಯಲ್ಲಿ ಆತ್ಮರಕ್ಷಣೆಗೆ ಆಯುಧ ಇಟ್ಟುಕೊಳ್ಳುವುದು ಅಗತ್ಯ’ ಎಂದರು.  

‘ಸುಹಾಸ್ ಶೆಟ್ಟಿ  ಆತ್ಮರಕ್ಷಣೆಗೆ ಇಟ್ಟುಕೊಂಡಿದ್ದ ಆಯುಧವನ್ನು ಪೊಲೀಸರು ತೆಗೆಸಿದ್ದರು. ಅವರ ಬಳಿ ಆತ್ಮರಕ್ಷಣೆಗೆ ಆಯುಧ ಇಲ್ಲ ಎಂದು ಕೊಲೆ ಮಾಡಿದವರಿಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದರು.

‘ಈ ಹಿಂಸೆಗೆ ಉತ್ತರಿಸಲು ಹಿಂದೂ ಸಮಾಜಕ್ಕೆ ಗೊತ್ತಿದೆ’

ಮಂಗಳೂರು: ‘ಮೃತ ವ್ಯಕ್ತಿ ಗೂಂಡಾ ಅಲ್ಲ. ಹಿಂದೂ ಸಮಾಜದ ರಕ್ಷಣೆಗೆ ದುಡಿದ ವ್ಯಕ್ತಿಯ ಬಲಿದಾನವಾಗಿದೆ. ಈ ಹಿಂಸೆಗೆ ಹೇಗೆ ಉತ್ತರಿಸಬೇಕು ಎಂದು ಹಿಂದೂ ಸಮಾಜಕ್ಕೆ ಗೊತ್ತಿದೆ. ಏನು ಮಾಡಬೇಕೋ ಅದನ್ನು ಸಮಾಜ ಮಾಡುತ್ತದೆ. ಅದನ್ನು ಹೇಳಿ ಮಾಡುವುದಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.

ಸುಹಾಸ್ ಶೆಟ್ಟಿ ಅಂತ್ಯಕ್ರಿಯೆಯಲ್ಲಿ ಶುಕ್ರವಾರ ಭಾಗವಹಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಇಲ್ಲಿ ಮುಸ್ಲಿಂ ತುಷ್ಟಿಕರಣ ಮಾಡುವ ಸರ್ಕಾರವಿದೆ. ಬಜರಂಗ ದಳವನ್ನು ನಿಷೇಧಿಸುತ್ತೇವೆ,  ಗೋಹತ್ಯೆ ನಿಷೇಧ ಕಾನೂನು ರದ್ದುಪಡಿಸುತ್ತೇವೆ ಎಂದು ಅವರು ಅಧಿಕಾರಕ್ಕೆ ಬರುವ ಮುನ್ನವೇ ಹೇಳಿದ್ದರು. ಈಗ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಾರೆ. ಇವೆಲ್ಲದರಲ್ಲೂ ಮುಸ್ಲಿಂ ತುಷ್ಟೀಕರಣ ಎದ್ದುಕಾಣಿಸುತ್ತಿದೆ. ಈ ಹತ್ಯೆಯಲ್ಲೂ ತುಷ್ಟೀಕರಣ ಮಾಡಬೇಡಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.