ADVERTISEMENT

ಅಂಗಾಂಗ ಲಭ್ಯತೆ, ಕಸಿ ನಿಯಮ ಸರಳೀಕರಣ: ಸಿಎಂ ಸಿದ್ದರಾಮಯ್ಯ

ರಾಜೀವ್‌ ಗಾಂಧಿ ಆರೋಗ್ಯ ವಿವಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
<div class="paragraphs"><p>ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದರು.&nbsp;&nbsp;</p></div>

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದರು.  

   

ಮಂಗಳೂರು: ‘ಕಿಡ್ನಿ ಕಸಿಗಾಗಿ ನೆಫ್ರೋ– ಯುರಾಲಜಿ ಸಂಸ್ಥೆಯಲ್ಲಿ 5 ಸಾವಿರ ರೋಗಿಗಳು ಹೆಸರು ನೋಂದಾಯಿಸಿ ಕಾಯುತ್ತಿದ್ದಾರೆ. ತಿಂಗಳಿಗೆ ಇಬ್ಬರು– ಮೂವರಿಗೆ ಮಾತ್ರ ಕಸಿ ಮಾಡಲು ಸಾಧ್ಯವಾಗುತ್ತಿದೆ. ಅಂಗಾಂಗಗಳು ಸರಳವಾಗಿ ಸಿಗುವಂತಾಗಲು ಮತ್ತು ಅಂಗಾಂಗ ಕಸಿ ನಿಯಮ ಸರಳೀಕರಣ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅಂಗಾಂಗ ಕಸಿ ಮಾಡುವಂತೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿ ಇದೆ. ಹೀಗಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ನೆಫ್ರೋ ಯುರಾಲಜಿ ಸಂಸ್ಥೆ ಮತ್ತು ನಾರಾಯಣ ಹೃದಯಾಲಯದಲ್ಲಿಯೂ ಉಚಿತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ’ ಎಂದರು.

‘ನಾನು ಒಮ್ಮೆಯೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿಲ್ಲ. ನಮ್ಮಂತಹ ರಾಜಕಾರಣಿಗಳೂ ಸೇರಿದಂತೆ ಎಲ್ಲ ವರ್ಗದವರೂ ಚಿಕಿತ್ಸೆ ಪಡೆಯುವ ಹಾಗೆ ನಮ್ಮ ಸರ್ಕಾರಿ ಆಸ್ಪತ್ರೆಗಳ ಸೇವೆ ಸುಧಾರಿಸಬೇಕು ಮತ್ತು ಅವು ಇನ್ನಷ್ಟು ಸಮಾಜಮುಖಿಯಾಗಬೇಕು’ ಎಂದು ಅವರು ಹೇಳಿದರು.

‘ವೈದ್ಯೋ ನಾರಾಯಣೋ ಹರಿಃ ಎಂದು ಹೇಳುತ್ತಿದ್ದರು. ಇಂದು ಈ ಮಾತು ಹೇಳುತ್ತಾರೋ ...’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಕೆಲಹೊತ್ತು ಉತ್ತರವೇ ಬರಲಿಲ್ಲ. ‘ಉತ್ತಮ ವೈದ್ಯರು ಇದ್ದರೆ ಹಾಗೆ ಹೇಳುತ್ತಾರೆ’ ಎಂದು ವೇದಿಕೆಯಲ್ಲಿದ್ದವರೊಬ್ಬರು ಹೇಳಿದರು. ‘ಎಲ್ಲ ವೈದ್ಯರು ಕೆಟ್ಟವರು ಎಂದು ನಾನು ಹೇಳಲ್ಲ. ವೈದ್ಯರು ಬಡವರ ಸೇವೆಗೂ ಗಮನ ಹರಿಸಬೇಕು’ ಎಂದು ಮುಖ್ಯಮಂತ್ರಿ ಆಶಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಭರತ್‌ ಶೆಟ್ಟಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹ್ಮದ್‌ ಮೊಹ್ಸಿನ ಮಾತನಾಡಿದರು. 

ಸಚಿವ ದಿನೇಶ್‌ ಗುಂಡೂರಾವ್‌, ಸಂಸದ ಕ್ಯಾ.ಬ್ರಿಜೇಶ್‌ ಚೌಟ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.  ಕುಲಪತಿ ಡಾ. ಎಂ.ಕೆ. ರಮೇಶ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಅಲೈಡ್‌ ಆ್ಯಂಡ್‌ ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ.ಯು.ಟಿ. ಇಫ್ತಿಕರ್‌ ಅಲಿ ವಂದಿಸಿದರು.

ವೈದ್ಯ ವಿದ್ಯಾರ್ಥಿಗಳು ಇತರೆ ಕ್ಷೇತ್ರಗಳಿಗೆ ವಲಸೆ ಹೋಗದೆ ಆರೋಗ್ಯ ಕ್ಷೇತ್ರದಲ್ಲೇ ತಮ್ಮ ಸೇವೆ ಸಲ್ಲಿಸಬೇಕು
ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.