ADVERTISEMENT

ಧರ್ಮಸ್ಥಳದಲ್ಲಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮ: ಸಾವಿರ ಕೆರೆಗಳಿಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 23:58 IST
Last Updated 17 ಡಿಸೆಂಬರ್ 2024, 23:58 IST
ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ‘ನಮ್ಮೂರು ನಮ್ಮ ಕೆರೆ’ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಚೌಡನಹಳ್ಳಿ ಕೆರೆಯನ್ನು ಮಾಜಿ ಶಾಸಕ ಲಿಂಗೇಶ್ ಅವರಿಗೆ ಹಸ್ತಾಂತರಿಸಿದರು
ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ‘ನಮ್ಮೂರು ನಮ್ಮ ಕೆರೆ’ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಚೌಡನಹಳ್ಳಿ ಕೆರೆಯನ್ನು ಮಾಜಿ ಶಾಸಕ ಲಿಂಗೇಶ್ ಅವರಿಗೆ ಹಸ್ತಾಂತರಿಸಿದರು   

ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ರಾಜ್ಯದಲ್ಲಿ 800 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು, 2025ರ ಏಪ್ರಿಲ್ ವೇಳೆಗೆ 200 ಕೆರೆಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಪುನಶ್ಚೇತನಗೊಳಿಸಿದ 800ನೇ ಕೆರೆ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಚೌಡನಹಳ್ಳಿ ಕೆರೆಯನ್ನು ಮಾಜಿ ಶಾಸಕ ಲಿಂಗೇಶ್ ಅವರಿಗೆ ಧರ್ಮಸ್ಥಳದಲ್ಲಿ ಮಂಗಳವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಕೆರೆಯನ್ನು ರಕ್ಷಣೆ ಮಾಡಿದರೆ ಪವಿತ್ರ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಸಿಗುತ್ತದೆ. ಜಲ ಸಂರಕ್ಷಣೆ ಮತ್ತು ಸ್ವಚ್ಛ ಪರಿಸರ ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಕೆರೆಗಳಿಗೆ ಕಸ ಹಾಕಬಾರದು. ಸುತ್ತಲೂ ಹಣ್ಣುಗಳ ಗಿಡಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಎಲ್ಲ ಕೆಲಸವನ್ನು ಸರ್ಕಾರ, ಗ್ರಾಮಪಂಚಾಯಿತಿ ಮಾಡಬೇಕೆಂದು ನಿರೀಕ್ಷಿಸದೆ ನಮ್ಮ ಊರು, ನಮ್ಮ ಕೆರೆ ಮತ್ತು ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ ಎಂದರು.

ಹೇಮಾವತಿ ವೀ.ಹೆಗ್ಗಡೆ ಮಾತನಾಡಿ, ಕೆರೆ ಸಮಿತಿಯವರು ಊರಿನ ಕೆರೆಯನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಶಿವಾನಂದ ಕಳವೆ, ಕೆರೆಗಳ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಕೆರೆ ಸಮಿತಿ ಸದಸ್ಯ ಕಿತ್ತೂರಿನ ಮಲ್ಲಿಕಾರ್ಜುನ ಹುದಲಿ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ಭಾಗವಹಿಸಿದ್ದರು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಎಂಜಿನಿಯರ್ ನಿಂಗರಾಜ್ ವಂದಿಸಿದರು. ನಿರ್ದೇಶಕ ಶಿವಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.