ADVERTISEMENT

ಸ್ಮಾರ್ಟ್‌ ಸಿಟಿ ಕಾಮಗಾರಿ: ಶ್ವೇತ ಪತ್ರ ಹೊರಡಿಸಿ: ಐವನ್ ಡಿಸೋಜ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:45 IST
Last Updated 25 ಜೂನ್ 2022, 6:45 IST

ಮಂಗಳೂರು: ‘ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ (ಎಂಎಸ್‌ಸಿಎಲ್‌) ವತಿಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಈ ಯೋಜನೆಯಡಿ ಖರ್ಚು ಮಾಡಿದ ಅನುದಾನದ ಬಗ್ಗೆ ತನಿಖೆ ಆಗಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಇಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಗರದ ಸುಂದರೀಕರಣಕ್ಕಾಗಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 598 ಕೋಟಿ ವೆಚ್ಚದ ಕಾಮಗಾರಿಗಳನ್ನು ನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ಇದರಲ್ಲಿ ರಸ್ತೆಗಳು ಮತ್ತು ಚರಂಡಿ ಹೊರತಾಗಿ ಬೇರಾವುದೇ ಪ್ರಮುಖ ಕಾಮಗಾರಿಗಳಿಲ್ಲ. ಎಲ್ಲ ಕಾಮಗಾರಿಗಳೂ ಅರೆ–ಬರೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ’ ಎಂದರು.

‘ನಗರದಲ್ಲಿ ಮೂರೂವರೆ ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಒಂದಾದರೂ ಕಾಮಗಾರಿ ಪೂರ್ಣಗೊಂಡಿರುವುದನ್ನು ತೋರಿಸಿ’ ಎಂದು ಅವರು ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸವಾಲು ಹಾಕಿದರು.

ADVERTISEMENT

‘ನಾನು ವಿಧಾನ ಪರಿಷತ್‌ ಸದಸ್ಯನಾಗಿದ್ದಾಗ ಈ ಯೋಜನೆ ಅಡಿ ನಗರದಲ್ಲಿ ಯಾವೆಲ್ಲ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂಬ ಬಗ್ಗೆ 800ಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹಿಸಿ ಕಿರುಪುಸ್ತಕ ರೂಪಿಸಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ್ದೆ. ದುರದೃಷ್ಟವಶಾತ್‌, ನಗರದಲ್ಲಿ ಸಾರ್ವಜನಿಕರ ಹಿತಕ್ಕೆ ವಿರುದ್ಧವಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಂಪನಕಟ್ಟೆಯಲ್ಲಿ ರಸ್ತೆ ವಿಸ್ತರಣೆಗೆ ಸಾಕಷ್ಟು ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವೈಜ್ಞಾನಿಕ ವೃತ್ತಗಳು, ಕಿರು ಉದ್ಯಾನಗಳಿಂದಾಗಿ ರಸ್ತೆಯ ಅಗಲ ಕಿರಿದಾಗಿದೆ. ಹಾಗಾಗಿ ಅಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಕದ್ರಿ ಉದ್ಯಾನವನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಅಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಕೆಲವು ಕಡೆ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ’ ಎಂದು ದೂರಿದರು.

‘420ಕ್ಕೂ ಅಧಿಕ ಸರ್ವಿಸ್‌ ಬಸ್‌ಗಳು ನಗರದಲ್ಲಿ ನಿತ್ಯ 1700 ಟ್ರಿಪ್‌ಗಳನ್ನು, 234 ಖಾಸಗಿ ಸಿಟಿ ಬಸ್‌ಗಳು 700 ಟ್ರಿಪ್‌ಗಳನ್ನು 180 ಕೆಎಸ್‌ಆರ್‌ಟಿಸಿ ಬಸ್‌ಗಳು 500 ಟ್ರಿಪ್‌ಗಳನ್ನು ಹಾಗೂ 60 ಕಾಂಟ್ರಾಕ್ಟ್‌ ಕ್ಯಾರಿಯೇಜ್‌ ಬಸ್‌ಗಳು 180 ಟ್ರಿಪ್‌ಗಳನ್ನು ನಡೆಸುತ್ತಿವೆ. ನಗರಕ್ಕೆ ಇಷ್ಟೆಲ್ಲ ಬಸ್‌ಗಳು ಪ್ರವೇಶಿಸುತ್ತಿದ್ದರೂ ಅವುಗಳಿಗೆ ಸೂಕ್ತ ಬಸ್‌ನಿಲ್ದಾಣವಿಲ್ಲ. ಲೇಡಿಗೋಷನ್‌ನಿಂದ ಲೈಟ್‌ಹೌಸ್‌ವರೆಗೂ ಪ್ರಯಾಣಿಕರಿಗೆ ಸೂಕ್ತ ತಂಗುದಾಣಗಳಿಲ್ಲ’ ಎಂದರು.

‘ಎಂಎಸ್‌ಸಿಎಲ್‌ ಪಾಲಿಕೆಯ ಅಧೀನ ಸಂಸ್ಥೆಯೇ ಹೊರತು, ಅದು ಪ್ರತ್ಯೇಕ ಸಂಸ್ಥೆಯಲ್ಲ. ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಅದು ಸಾರ್ವಜನಿಕರ ಹಿತ ಕಾಯುವಂತಿರಬೇಕು. ಕಾಂಗ್ರೆಸ್‌ ನಾಯಕರು ಈ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಿದ್ದಾರೆ’ ಎಂದರು.

ಅಗ್ನಿಪಥ ಯೋಜನೆ ವಿರೋಧಿಸಿ 27ರಂದು ಪ್ರತಿಭಟನೆ
ಕೇಂದ್ರ ಸರ್ಕಾರವು ಸೇನಾ ನೇಮಕಾತಿ ಸಂಬಂಧ ಜಾರಿಗೊಳಿಸುತ್ತಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷವು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಇದೇ 27ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ ಪ್ರತಿಭಟನೆ ನಡೆಸಲಿದೆ ಎಂದು ಐವನ್‌ ಡಿಸೋಜ ತಿಳಿಸಿದರು.

‘ಈ ಯೋಜನೆಯಡಿ ಸೇನೆಗೆ ಸೇರುವಾಗ ಯುವಕರು ಕೇವಲ ಪಿ.ಯು. ವಿದ್ಯಾಭ್ಯಾಸವನ್ನು ಹೊಂದಿರುತ್ತಾರೆ. ಹಾಗಾಗಿ ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಅವರಿಗೆ ಉಜ್ವಲ ಭವಿಷ್ಯ ಇರುವುದಿಲ್ಲ. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.