ADVERTISEMENT

ಮಂಗಳೂರು | ಕಚ್ಚಿದರೂ ಹಾವು; ತಡೆಯಬಹುದು ಸಾವು

ಮಳೆಗಾಲದಲ್ಲಿ ಹೆಚ್ಚುತ್ತದೆ ಹಾವುಗಳ ಸಂಚಾರ, ವಿಷಯುಕ್ತ ಹಾವು ಕಡಿತ ತಡೆಯಲು ವಹಿಸಬೇಕು ಮುನ್ನೆಚ್ಚರ, ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಸಂಚಕಾರ

ಪ್ರವೀಣ್‌ ಕುಮಾರ್‌ ಪಿ.ವಿ
Published 2 ಜೂನ್ 2025, 6:56 IST
Last Updated 2 ಜೂನ್ 2025, 6:56 IST
ಡಾ.ನವೀನ್‌ಚಂದ್ರ ಕುಲಾಲ್
ಡಾ.ನವೀನ್‌ಚಂದ್ರ ಕುಲಾಲ್   

ಮಂಗಳೂರು: ಮಳೆಗಾಲ ಮತ್ತೆ ಶುರುವಾಗಿದೆ. ಜೊತೆ ಜೊತೆಗೆ ಹಾವು ಕಡಿತದ ಪ್ರಕರಣಗಳು ವರದಿಯಾಗುವ ಪ್ರಮಾಣವೂ ಹೆಚ್ಚುತ್ತಿದೆ.

ಮೇ, ಜೂನ್ ತಿಂಗಳು ಕನ್ನಡಿ (ಮಂಡಲ) ಹಾವು, ನಾಗರ ಹಾವು, ಕಡಂಬಳ ಮೊದಲಾದ ವಿಷಯುಕ್ತ ಹಾವುಗಳ ಮರಿಗಳು ಮೊಟ್ಟೆಯಿಂದ ಹೊರಬರುವ ಸಮಯ. ಮಳೆಗಾಲದಲ್ಲಿ ಹಾವಿನ ಮರಿಗಳ ಸಂಚಾರ ಜಾಸ್ತಿ ಇರುತ್ತದೆ. ಹಾವಿನ ಮರಿಗಳಲ್ಲೂ ವಿಷ ಇರುತ್ತದೆ. ಅವುಗಳ ವಿಷವೂ ತೀಕ್ಷ್ಣವಾಗಿರುತ್ತದೆ. ಹಾಗಾಗಿ ಅವುಗಳ ಕಡಿತ ಹೆಚ್ಚು ಅಪಾಯಕಾರಿ. ಹಾವುಗಳ ಆವಾಸಗಳಲ್ಲಿ ಮಳೆ ನೀರು ತುಂಬಿದಾಗ ಅವು ಕಕ್ಕಾಬಿಕ್ಕಿಯಾಗಿ ಆಶ್ರಯವನ್ನರಸಿ ಜನವಸತಿ ಪ್ರದೇಶಕ್ಕೆ ಬರುವ ಸಾಧ್ಯತೆ ಜಾಸ್ತಿ. ಕಟ್ಟಿಗೆ ಕೂಡಿಟ್ಟ ಜಾಗ, ಶೌಚಾಲಯಗಳಲ್ಲಿ, ಸಂದುಗಳಲ್ಲಿ ಅವು ಸೇರಿಕೊಳ್ಳುತ್ತವೆ.

ಮೊಟ್ಟೆಗೆ ಕಾವು ಕೊಡುವ ಎರಡು ತಿಂಗಳು ತಾಯಿ ಹಾವು ಆಹಾರ ಸೇವಿಸುವುದು ಕಡಿಮೆ.‌ ಕೆಲ ಹಾವುಗಳು ಈ ಅವಧಿಯಲ್ಲಿ ಆಹಾರ ಸೇವಿಸುವುದೇ ಇಲ್ಲ. ಅವುಗಳ ದೇಹದಲ್ಲಿ ಪೋಷಕಾಂಶಗಳ ಕೊರತೆ ಇರುತ್ತದೆ.‌ ಅದನ್ನು ನೀಗಿಸಿಕೊಳ್ಳಲು, ಮೊಟ್ಟೆಯಿಂದ ಹಾವಿನ ಮರಿಗಳು ಹೊರ ಬಂದ ಬಳಿಕ, ತಾಯಿ ಹಾವುಗಳು ಆಹಾರದ ಹುಡುಕಾಟದಲ್ಲಿ ತೊಡಗುತ್ತವೆ. ಹಾಗಾಗಿ ಮಳೆಗಾಲದಲ್ಲಿ ಹಾವು ಕಚ್ಚುವ ಸಾಧ್ಯತೆ ಜಾಸ್ತಿ ಎನ್ನುತ್ತಾರೆ ಉರಗಸ್ನೇಹಿ ಗುರುರಾಜ ಸನಿಲ್. 

ADVERTISEMENT

ಕೃಷಿ ಚಟುವಟಿಕೆ ಬಿರುಸು ಪಡೆಯುವ ಸಮಯ ಇದು. ಹಳ್ಳಿಗಳಲ್ಲಿ ಕೃಷಿಕರ ಓಡಾಟ ಜಾಸ್ತಿ. ಮೊದಲ ಮಳೆಗೆ ನದಿಯ ಮೀನುಗಳು ಸಂತಾನೋತ್ಪತ್ತಿ ಸಲುವಾಗಿ ಹಳ್ಳಕೊಳ್ಳಗಳತ್ತ ಧಾವಿಸುತ್ತವೆ.‌ ಜನ ರಾತ್ರಿ ವೇಳೆ ಅವುಗಳ ಶಿಕಾರಿಗೆ (ಉಬೇರ್) ತೆರಳುತ್ತಾರೆ‌. ಈ ವೇಳೆ ಹಾವು ಕಡಿತಕ್ಕೆ ಒಳಗಾಗುವ ಪ್ರಮೇಯ ಜಾಸ್ತಿ. ಕರಾವಳಿಯಲ್ಲಂತೂ ಮೀನು ಶಿಕಾರಿಗೆ ತೆರಳಿದವರು ಹಾವು ಕಡಿತಕ್ಕೆ ಒಳಗಾಗುವ ಪ್ರಕರಣಗಳು ಪ್ರತಿ ವರ್ಷವೂ ವರದಿಯಾಗುತ್ತಿವೆ. ಈಗ ಎಲ್ಲ ವಿಧದ ವಿಷಯುಕ್ತ ಹಾವು ಕಡಿತಕ್ಕೆ ಅಲೋಪತಿಯಲ್ಲಿ ಔಷಧ (ಆಂಟಿ ಸ್ನೇಕ್‌ ವೆನಮ್ ಸೀರಮ್) ಲಭ್ಯ. ಹಾವು ಕಚ್ಚಿದ ತಕ್ಷಣವೇ ಚಿಕಿತ್ಸೆ ಲಭಿಸುವಂತೆ ನೋಡಿಕೊಂಡರೆ ವಿಷ ಏರಿ ಸಾವು ಸಂಭವಿಸುವುದನ್ನು ತಡೆಯಬಹುದು ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನಚಂದ್ರ ಕುಲಾಲ್.

ಈಚೆಗೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಬ್ಬರ ಕೈಗೆ ಹಾವು ಕಚ್ಚಿತ್ತು. ಅವರು ತಕ್ಷಣ ವೈದ್ಯರ ಬಳಿಗೆ ತೆರಳಲಿಲ್ಲ. ಬದಲಿಗೆ ಮನೆಯಲ್ಲೇ ನಾಟಿ ಮದ್ದು ಮಾಡಿದರು. ಪರಿಸ್ಥಿತಿ ಕೈಮೀರಿದಾಗ ಆಸ್ಪತ್ರೆಗೆ ಹೋದರು. ‌ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದರು.

ಹಾವು ಕಚ್ಚಿದವರನ್ನು ಬದುಕಿಸುವಂಥ ಔಷಧಿ ಲಭ್ಯವಿದೆ. ಆದರೂ ಜನ ನಿರ್ಲಕ್ಷ್ಯ ವಹಿಸಿ ನಾಟಿ ಮದ್ದಿನ ಮೊರೆ ಹೋಗುತ್ತಾರೆ. ಕಲ್ಲಿನ ಮದ್ದಿನಿಂದ, ನೀರಿನ ಮದ್ದಿನಿಂದ ಹಾವಿನ ವಿಷ ನಿವಾರಿಸಬಹುದು ಎಂಬ ಮೂಢನಂಬಿಕೆಗಳೂ ಹಾವು ಕಡಿತಕ್ಕೆ ಒಳಗಾದವರ ಸಾವಿಗೆ ಕಾರಣವಾಗುತ್ತವೆ. ಕಲ್ಲಿನ ಮೂಲಕ ವಿಷ ತೆಗೆಯುವುದು, ಮೂಲಿಕೆಗಳ ಲೇಪ ಹಚ್ಚುವುದು, ಚಹ ಕುಡಿಸಿ ನಿದ್ದೆ ಮಾಡದ ಹಾಗೆ ಮಾಡುವ ತಂತ್ರಗಳನ್ನು ಅನುಸರಿಸುತ್ತಾರೆ. ಆದರೆ, ಇವೆಲ್ಲ ನಿಜವಾದ ಚಿಕಿತ್ಸೆಗಳಲ್ಲ ಎಂದು ಅವರು ವಿವರಿಸಿದರು.

ಹಿಂದೆ ಹಾವು ಕಡಿತದ ಬಗ್ಗೆ ಜಾಗೃತಿ ಇರಲಿಲ್ಲ. ಹಾವು ಕಡಿತಕ್ಕೆ ಅಲೋಪಥಿಯಲ್ಲಿ ಪರಿಣಾಮಕಾರಿ ಚಿಕಿತ್ಸೆ ಇದೆ ಎಂಬುದೇ ಹಲವರಿಗೆ ಗೊತ್ತಿರಲಿಲ್ಲ. ಹಾಗಾಗಿ ನಾಟಿ ವೈದ್ಯರ ಬಳಿಗೆ ಹೋಗುತ್ತಿದ್ದರು. ಅವರ ಬಳಿಗೆ ಹೋದವರಲ್ಲಿ ಕೆಲವರಿಗೆ ವಾಸಿ ಆಗುತ್ತಿತ್ತು. ಕಚ್ಚಿದ ಹಾವಿನಲ್ಲಿ ಕೆಲವೊಮ್ಮೆ ವಿಷದ ಪ್ರಮಾಣ ಇಲ್ಲದೆ ಇರಬಹುದು. ಬೇರೆ ಪ್ರಾಣಿಗೆ ಕಚ್ಚಿದ ಹಾವು ಕೊನೆಯದಾಗಿ ವ್ಯಕ್ತಿಗೆ ಕಚ್ಚಿದ್ದರೆ, ಅದರ ಗ್ರಂಥಿಯಲ್ಲಿ ವಿಷ ಖಾಲಿ ಆಗಿರುವ ಸಾಧ್ಯತೆ ಇರುತ್ತದೆ. ಅಂಥವುಗಳಿಗೆ ಶುಷ್ಕ ಕಡಿತ (ಡ್ರೈ ಬೈಟ್) ಎನ್ನುತ್ತೇವೆ. ಇಂಥ ನಾಲ್ಕೈದು ಪ್ರಕರಣಗಳಲ್ಲಿ ಹಾವು ಕಡಿತಕ್ಕೊಳಗಾದವರು ಗುಣಮುಖರಾಗಿದ್ದರೆ. ಜನರು ಅದಕ್ಕೆ ನಾಟಿ ವೈದ್ಯರ ಮದ್ದೇ ಕಾರಣ ಎಂದು ಭಾವಿಸುತ್ತಾರೆ ಎಂದು ಅವರು ವಿವರಿಸಿದರು.

ಸಾಮಾನ್ಯವಾಗಿ ಕರಾವಳಿಯಲ್ಲಿ ಕನ್ನಡಿ ಹಾವು (ಕಂದೊಡಿ), ಕಡಂಬಳ ಅಥವಾ ನಾಗರ ಹಾವು ಕಡಿತದ ಪ್ರಕರಣಗಳು ಜಾಸ್ತಿ. ನಾಗರ ಹಾವು ಗಾತ್ರದಲ್ಲಿ ದೊಡ್ಡದಿದ್ದು, ಜನರ‌ ಕಣ್ಣಿಗೆ ಸುಲಭವಾಗಿ ಕಾಣಿಸುತ್ತದೆ. ಹಾಗಾಗಿ ಅದರ ಬಗ್ಗೆ ಜನ ಎಚ್ಚರ ವಹಿಸುತ್ತಾರೆ. ಕಡಂಬಳ ಹಾವು ಸಣ್ಣ ಗಾತ್ರದ್ದಾಗಿರುತ್ತದೆ. ಇವು ಹಾವು ಕಚ್ಚಿದ ಜಾಗದಲ್ಲಿ ಊತ ಇರುವುದಿಲ್ಲ. ಹಾಗಾಗಿ ಜನ ಅದರ ಬಗ್ಗೆ ಗಮನ ವಹಿಸುವುದಿಲ್ಲ. ಹಾಗಾಗಿ ಕಡಂಬಳ ಹಾವು ಕಚ್ಚಿ ಸಾವು ಸಂಭವಿಸುವ ಪ್ರಮೇಯ ಜಾಸ್ತಿ. 

ಕಡಂಬಳ ಹಾವಿನಲ್ಲಿ ನರಮಂಡಲಕ್ಕೆ ವ್ಯಾಪಿಸುವ (ನ್ಯೂರೊಜೆನಿಕ್) ತೀಕ್ಷ್ಣ ವಿಷ ಇರುತ್ತದೆ‌. ಈ ಹಾವು ಕಡಿತದಿಂದ ಕಣ್ಣು ಮಂಜಾಗುತ್ತದೆ. ಕುತ್ತಿಗೆ ಸ್ನಾಯು ದುರ್ಬಲವಾಗುತ್ತದೆ. ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸಾವು ಸಂಭವಿಸುತ್ತದೆ.  ಕನ್ನಡಿ ಹಾವಿನ ವಿಷವು ದೇಹದ ರಕ್ತದ ಮೂಲಕ ಅಂಗಾಂಶಗಳಿಗೆ ಹರಡುತ್ತದೆ. ಈ ಹಾವು ಕಡಿತಕ್ಕೆ‌ ಒಳಗಾದವರು ಸೂಕ್ತ ಚಿಕಿತ್ಸೆ ಲಭಿಸದೆ ಹೋದರೆ, ಮೂತ್ರಕೋಶ ವೈಫಲ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಮೃತಪಡುವ ಅಪಾಯವಿದೆ ಎಂದು ಅವರು ತಿಳಿಸಿದರು.  

ಈ ಭಾಗದಲ್ಲಿ ನಾಲ್ಕು ವಿಧದ ಕನ್ನಡಿ ಹಾವುಗಳು (ಮಂಡಲ ಹಾವು ಎಂದೂ ಕರೆಯಲಾಗುತ್ತದೆ) ಕಂಡುಬರುತ್ತವೆ. ಗರಗಸ ಹುರುಪೆಯ ಮಂಡಲ ಹಾವು ಅಥವಾ ಚುರುಟೆ (ಸಾಫ್ಟ್‌ ಸ್ಕೇಲ್ಡ್ ವೈಪರ್), ಮಾಮೂಲಿ ಮಂಡಲ ಹಾವು (ರಸ್ಸೆಲ್ಸ್ ವೈಪರ್), ಗೂನು ಮೂಗಿನ ಗುಳಿ ಮಂಡಲ ಹಾವು (ಹಂಪ್ ನೋಸ್ಡ್ ಪಿಟ್ ವೈಪರ್), ಮಲಬಾರ್ ಮಂಡಲ ಹಾವು (ಮಲಬಾರ್ ಪಿಟ್ ವೈಪರ್) ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ ಎಂದು ಅವರು ತಿಳಿಸಿದರು.

ಹಾವು ಕಚ್ಚಿದ ತಕ್ಷಣ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವುದು ಮುಖ್ಯ. ತಡಮಾಡಿದಷ್ಟೂ ಸಾವು ಸಂಭವಿಸುವ ಸಾಧ್ಯತೆ ಜಾಸ್ತಿ ಎನ್ನುತ್ತಾರೆ ಅವರು. 

ಹಾವು ಕಚ್ಚಿದರೆ ಅದಕ್ಕೆ ಈಗ ಚಿಕಿತ್ಸೆ ಲಭ್ಯ. ಚಿಕಿತ್ಸೆ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಬೇಡಿ. ಅದನ್ನು ವೈದ್ಯರಿಗೆ ಬಿಡಿ. ಕಾಲಹರಣ ಮಾಡದೆ ಸಮೀಪದ ಪಿಎಚ್‌ಸಿ ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ
ಡಾ.ನವೀನಚಂದ್ರ ಕುಲಾಲ್ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ
ಮಳೆಗಾಲದಲ್ಲಿ ಮನೆಯ ಸಂದುಗೊಂದುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಇದೆ.‌ ಹೊರಗಡೆಯೂ ಹಾವುಗಳ ಸಂಚಾರ ಜಾಸ್ತಿ. ಹಾವು ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಬೇಕು
ಗುರುರಾಜ್ ಸನಿಲ್ ಉರಗಸ್ನೇಹಿ

ಪಿಎಚ್‌ಸಿಗಳಲ್ಲಿ ಆ್ಯಂಟಿ ಸ್ನೇಕ್ ವೆನಮ್ ಸೀರಮ್‌

ದಕ್ಷಿಣ ಕನ್ನಡ‌ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಟಿ ಸ್ನೇಕ್ ಸೀರಮ್‌ ಲಭ್ಯ ಇದೆ. ಇದು ಎಲ್ಲ ಬಗೆಯ ಹಾವುಗಳ ವಿಷವನ್ನು ನಿವಾರಿಸುತ್ತದೆ. ಹಾವು ಕಡಿತಕ್ಕೆ ಒಳಗಾದವರು ಕಾಲಹರಣ ಮಾಡದೆ ಸಮೀಪದ ಪಿಎಚ್‌ಸಿಗೆ ಅಥವಾ ಸರ್ಕಾರಿ ಆಸ್ಪತ್ರೆಗೆ ತೆರಳಬಹುದು.‌ ಕೆಲ ಖಾಸಗಿ ಆಸ್ಪತ್ರೆಗಳಲ್ಲೂ  ಆ್ಯಂಟಿ ಟಿ ಸ್ನೇಕ್ ವೆನಮ್ ಸೀರಮ ಲಭ್ಯವಿದೆ ಎಂದು ಡಾ.ನವೀನಚಂದ್ರ ಕುಲಾಲ್ ತಿಳಿಸಿದರು.

ಕಟ್ಟು ಕಟ್ಟುವುದು ಪರಿಣಾಮಕಾರಿಯಲ್ಲ

ಹಿಂದೆಲ್ಲ ಹಾವು ಕಚ್ಚಿದ ಭಾಗದಿಂದ ವಿಷಯುಕ್ತ ರಕ್ತವು ದೇಹದ ಬೇರೆ ಅಂಗಗಳಿಗೆ ಸಂಚರಿಸದಂತೆ ತಡೆಯಲು ಅಲ್ಲಿ ಕಟ್ಟು ಕಟ್ಟುವ ತಂತ್ರ ಅನುಸರಿಸುತ್ತಿದ್ದರು. ಆದರೆ ಆ ವಿಧಾನ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಸಾಬಿತಾಗಿದೆ. ಕೆಲವು ಪ್ರಕರಣಗಳಲ್ಲಿ ಹಾವು ಕಚ್ಚಿದ ಭಾಗದಲ್ಲಿ ಗ್ಯಾಂಗ್ರಿನ್ ಉಂಟಾಗುವುದಕ್ಕೂ ಇದು ಕಾರಣವಾದ ಉದಾಹರಣೆಗಳಿವೆ.‌ ಹಾಗಾಗಿ ಹಾವು ಕಚ್ಚಿದ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಡಾ.ನವೀನಚಂದ್ರ ಕುಲಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.