ADVERTISEMENT

ದ್ವೇಷ ಬಿತ್ತುವ ಪೋಸ್ಟ್: ಇನ್‌ಸ್ಟಾ ಗ್ರಾಂ ಪೇಜ್ ರದ್ದು

ಜಾಲತಾಣಗಳ ಮೇಲೆ ನಿರಂತರ ನಿಗಾ: ಪೊಲೀಸ್ ಕಮಿಷನರ್

​ಪ್ರಜಾವಾಣಿ ವಾರ್ತೆ
Published 10 ಮೇ 2025, 8:07 IST
Last Updated 10 ಮೇ 2025, 8:07 IST

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವ ದ್ವೇಷ ಬಿತ್ತುವ, ಪ್ರಚೋದನಕಾರಿ ಪೋಸ್ಟ್‌ಗಳ ಮೇಲೆ ವಿಶೇಷ ನಿಗಾ ವಹಿಸಿರುವ ಪೊಲೀಸರು, ಹಲವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜನರ ನಡುವೆ ದ್ವೇಷ ಭಾವನೆ ಮೂಡಿಸುತ್ತಿರುವ ಆರೋಪದ ಮೇಲೆ ಸುಮಾರು 1 ಲಕ್ಷ ಫಾಲೋವರ್‌ಗಳು ಇದ್ದ ಇನ್‌ಸ್ಟಾ ಗ್ರಾಂ ಪೇಜ್ ಅನ್ನು ಡಿ ಆ್ಯಕ್ಟಿವೇಟ್‌ ಮಾಡಿದ್ದಾರೆ.

ಬಜಪೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ದ್ವೇಷಭಾವನೆ ಹುಟ್ಟುವಂತೆ ‘beary_royal_nawab’ ಎಂಬ ಇನ್ ಸ್ಟಾ ಗ್ರಾಂ ಪೇಜ್‌ನಲ್ಲಿ ಪೋಸ್ಟ್‌ಗಳನ್ನು ಮಾಡಲಾಗುತ್ತಿತ್ತು. ಈ ಪೇಜ್‌ಗೆ 1 ಲಕ್ಷದಷ್ಟು ಫಾಲೋವರ್‌ಗಳು ಇದ್ದರು. ನಗರದ ಬರ್ಕೆ ಮತ್ತು ಮೂಲ್ಕಿ ಠಾಣೆಗಳಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ಈ ಇನ್‌ಸ್ಟಾ ಗ್ರಾಂ ಪೇಜ್‌ ಬಗ್ಗೆ ಮಾಹಿತಿ ನೀಡುವಂತೆ ಲಾ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಗೆ ಪತ್ರ ಬರೆಯಲಾಗಿತ್ತು. ಈ ಏಜೆನ್ಸಿಯು ‘beary_royal_nawab’ ಪೇಜ್ ಭಾರತದಲ್ಲಿ ಕಾರ್ಯ ನಿರ್ವಹಿಸದಂತೆ ರದ್ದುಗೊಳಿಸಿದೆ. ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘beary_of_ullala’ ಇನ್‌ಸ್ಟಾ ಗ್ರಾಂ ಪೇಜ್‌ನಲ್ಲಿ 2022ರಲ್ಲಿ ಸುರತ್ಕಲ್‌ನಲ್ಲಿ ಕೊಲೆಯಾದ ಫಾಝಿಲ್ ಎಂಬ ಯುವಕನ ಫೋಟೊ ಇರುವ ರೀಲ್ ಶೇರ್ ಆಗಿದೆ. ಅದನ್ನು ವೀಕ್ಷಣೆ ಮಾಡಿರುವ ಅಕೌಂಟ್‌ದಾರನೊಬ್ಬನು ಪ್ರಚೋದನಕಾರಿ ಕಾಮೆಂಟ್ ಮಾಡಿದ್ದು, ಭಾರತೀಯ ನ್ಯಾಯ ಸಂಹಿತೆ ಆಧಾರದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಮಂಗಳೂರು ಸೆನ್‌ ಠಾಣೆಗೆ ಹಸ್ತಾಂತರಿಸಲಾಗಿತ್ತು. ಕಾಮೆಂಟ್ ಮಾಡಿದ ವ್ಯಕ್ತಿ ಮೊಹಮ್ಮದ್ ಅಕ್ರಂ ಹಳೆಯಂಗಡಿ ಎಂಬಾತನನ್ನು ಪತ್ತೆ ಹಚ್ಚಿ, ತನಿಖೆ ಮುಂದುವರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.