ಮಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ಗಡುವನ್ನು ಇದೇ 18ರವರೆಗೆ ವಿಸ್ತರಿಸಿದ ಬಳಿಕವೂ ಮಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಕುಟುಂಬಗಳ ಮಾಹಿತಿ ಸಂಗ್ರಹ ಕಾರ್ಯ ಆಮೆಗತಿಯಲ್ಲೇ ಸಾಗಿದೆ.
ಗುರುವಾರ ರಾತ್ರಿವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶೇ 75ರಷ್ಟು ಕುಟುಂಬಗಳ ಮಾಹಿತಿ ಕಲೆಹಾಕಲಾಗಿದ್ದರೆ, ಪಾಲಿಕೆ ವ್ಯಾಪ್ತಿಯಲ್ಲಿ ಇದರ ಪ್ರಮಾಣ ಶೇ 62ರಷ್ಟಿದೆ. ಇನ್ನೂ ಸಮೀಕ್ಷೆ ನಡೆಸಲು ಬಾಕಿ ಇರುವ ಮನೆಗಳನ್ನು ಪತ್ತೆ ಹಚ್ಚುವುದು ಸಮೀಕ್ಷಾದಾರರ ಪಾಲಿಗೆ ಕಗ್ಗಂಟಾಗಿದೆ.
‘ಇಲ್ಲಿ ಕೆಲವು ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ 40–50 ಮನೆಗಳಿವೆ. ಅವುಗಳ ಮೀಟರ್ ಒಂದೇ ಕಡೆ ಇರುತ್ತದೆ. ಅಷ್ಟು ಮನೆಗಳ ಯುಎಚ್ ಐಡಿಯನ್ನು ಮೆಸ್ಕಾಂ ಸಿಬ್ಬಂದಿ ಆ ಮೀಟರ್‌ಗಳ ಬಳಿ ಅಂಟಿಸಿ ಹೋಗಿದ್ದಾರೆ. ನಿರ್ದಿಷ್ಟ ಯುಎಚ್ ಐಡಿಗೆ ಸಂಬಂಧಿಸಿದ ಯಾರದ್ದು ಎಂಬುದು ಹುಡುಕಲು ಕಷ್ಟವಾಗುತ್ತಿದೆ. ಕೆಲವು ಮನೆಯವರಿಗೆ ತಮ್ಮ ಮನೆಯ ವಿದ್ಯುತ್ ಸಂಪರ್ಕದ ಆರ್‌ಆರ್ ಸಂಖ್ಯೆಯೂ ಗೊತ್ತಿಲ್ಲ. ಯುಎಚ್ ಗುರುತಿನ ಚೀಟಿಯಲ್ಲಿ ಕುಟುಂಬದ ಸದಸ್ಯರ ವಿವರವನ್ನು ನೀಡುತ್ತಿದ್ದರೆ ಒಳ್ಳೆಯದಿತ್ತು’ ಎಂದು ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಶಿಕ್ಷಕರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.
‘ಇಲ್ಲಿ ಕೆಲವು ಕುಟುಂಬಗಳು ಪಡಿತರ ಚೀಟಿಯನ್ನು ಹೊಂದಿಲ್ಲ. ಕೆಲವರ ಬಳಿ ಆಧಾರ್ ಸಂಖ್ಯೆಯೂ ಇಲ್ಲ. ಕೆಲವು ಮನೆಗಳಲ್ಲಿ ವಯಸ್ಸಾದವರು ಮಾತ್ರ ಇದ್ದಾರೆ. ಸಮೀಕ್ಷೆಯಲ್ಲಿ ಕೇಳುವ ಬಹುತೇಕ ಪ್ರಶ್ನೆಗಳಿಗೆ ಅವರಿಗೆ ಉತ್ತರಿಸಲು ಆಗುತ್ತಿಲ್ಲ. ಅವರ ಕುಟುಂಬದ ಸದಸ್ಯರು ವಿದೇಶಗಳಲ್ಲಿ ಹಾಗೂ ಪರವೂರುಗಳಲ್ಲಿ ನೆಲೆಸಿರುವುದರಿಂದ, ತಕ್ಷಣ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ವಿವರಗಳನ್ನು ಪಡೆಯಲೂ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವು ಮನೆಯವರು ನಮ್ಮನ್ನು ಗೇಟಿನ ಒಳಗೇ ಬಿಟ್ಟುಕೊಳ್ಳುತ್ತಿಲ್ಲ’ ಎಂದು ಮತ್ತೊಬ್ಬ ಸಮೀಕ್ಷೆದಾರರು ವಿವರಿಸಿದರು.
‘ನಗರದ ಅನೇಕ ಮನೆಗಳಲ್ಲಿ ಈಗ ಯಾರೂ ನೆಲೆಸಿಲ್ಲ. ಕೆಲವು ಮನೆಗಳಲ್ಲಿ ಉತ್ತರ ಭಾರತದವರು ಬಾಡಿಗೆಗೆ ಇದ್ದಾರೆ. ಅವರು ಸಮೀಕ್ಷೆಗೆ ವಿವರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬಾಕಿ ಉಳಿದ ಮನೆಗಳಿಗೆ ಎರಡೆರಡು ಸಲ ಹೋಗಿ, ಅಲ್ಲಿ ಬಾಗಿಲು ಹಾಕಿದ್ದರೆ ಫೋಟೊ ತೆಗೆದು ಅಪ್ಲೋಡ್ ಮಾಡಬೇಕಾಗಿದೆ’ ಎಂದು ಅವರು ತಿಳಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ತುಸು ಸಮಸ್ಯೆ ಇರುವುದು ನಿಜ. ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.