ADVERTISEMENT

ಸ್ಪರ್ಧೆಯಲ್ಲಿ ಭಾಗವಹಿಸಿ ಸೋಲುವುದು ಉತ್ತಮ

ಶ್ರೀದೇವಿ ಕಾಲೇಜಿನಲ್ಲಿ ‘ಶ್ರೀದೇವಿ ಸಂಭ್ರಮ’ ಉದ್ಘಾಟಿಸಿದ ಪ್ರೊ. ಖಾನ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:51 IST
Last Updated 13 ಮಾರ್ಚ್ 2020, 10:51 IST
ಕೆಂಜಾರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆರಂಭವಾದ ಶ್ರೀದೇವಿ ಸಂಭ್ರಮವನ್ನು ಪ್ರೊ.ಎ.ಎಂ. ಖಾನ್‌ ಉದ್ಘಾಟಿಸಿದರು.
ಕೆಂಜಾರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆರಂಭವಾದ ಶ್ರೀದೇವಿ ಸಂಭ್ರಮವನ್ನು ಪ್ರೊ.ಎ.ಎಂ. ಖಾನ್‌ ಉದ್ಘಾಟಿಸಿದರು.   

ಮಂಗಳೂರು: ಯಾವುದೇ ಸ್ಪರ್ಧೆ ಇರಲಿ ಭಾಗವಹಿಸದೇ ಸೋಲುವುದಕ್ಕಿಂತ, ಭಾಗವಹಿಸಿ ಸೋಲುವುದು ಉತ್ತಮ. ಸ್ವರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮ ವಿಶ್ವಾಸ ಹೆಚ್ಚಾಗಿ ಇನ್ನಷ್ಟು ಸ್ವರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ. ಖಾನ್‌ ಹೇಳಿದರು.

ಕೆಂಜಾರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ‘ಶ್ರೀದೇವಿ ಸಂಭ್ರಮ - 2020’ ರಾಷ್ಟ್ರೀಯ ತಾಂತ್ರಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಎಂಬಿಎ ವಿಭಾಗದ ‘ಎಚ್ಲಾನ್-2020’ ಹಾಗೂ ಎಂಸಿಎ. ವಿಭಾಗದ ‘ಮೇಧಾ-2020’ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ, ಗಾಂಧೀಜಿ, ಜವಾಹರಲಾಲ್‌ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್‌ರಂತಹ ವ್ಯಕ್ತಿಗಳನ್ನು ಇಂದಿನ ಯುವಜನತೆ ಸ್ಫೂರ್ತಿಯಾಗಿ ಪರಿಗಣಿಸಿ, ಮಾದರಿ ವ್ಯಕ್ತಿಗಳಾಗಿ ಬದುಕಬೇಕು. ಮಗು ಹುಟ್ಟುವಾಗ ಅತ್ತು ಉಳಿದವರೆಲ್ಲ ನಕ್ಕರೆ, ಸತ್ತಾಗ ಅವನು ನಕ್ಕು, ಉಳಿದವರು ಅಳುವ ಹಾಗೆ ಬಾಳಬೇಕು. ಇವೆಲ್ಲ ಸಾಧ್ಯವಾಗುವುದು ಮನುಷ್ಯ ಅತ್ಯುತ್ತಮ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಎಂದು ಹೇಳಿದರು.

ADVERTISEMENT

‘ಶ್ರೀದೇವಿ ಸಂಭ್ರಮ’ ಹೆಸರೇ ಹೇಳುವಂತೆ ಕಾಲೇಜಿನ ಕ್ಯಾಂಪಸ್ ಸಂಭ್ರಮಕ್ಕೆ ಅಣಿಯಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇದು ಸಾಂಸ್ಕೃತಿಕ ಮಾತ್ರವಲ್ಲದೆ, ಕೌಶಲಪೂರ್ಣ ಸ್ವರ್ಧೆಗಳಾದ ಏರ್‌ ಶೋ, ಗಲ್ಲಿ ಕ್ರಿಕೆಟ್‌ಗಳನ್ನು ಒಳಗೊಂಡಿದೆ ಎಂದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ದಿಲೀಪ್‌ ಕುಮಾರ್ ಕೆ. ಸ್ವಾಗತಿಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಿಧೀಶ್‍ ಎಸ್. ಶೆಟ್ಟಿ, ಕಾರ್ಯದರ್ಶಿ ಮೈನಾ ಎಸ್.ಶೆಟ್ಟಿ, ಶ್ರೀದೇವಿ ಇನ್‌ಸ್ಟಿಟ್ಯೂಟ್‍ ಆಫ್‌ ಟೆಕ್ನಾಲಜಿಯ ನಿರ್ದೇಶಕ ಡಾ.ಕೆ.ಇ.ಪ್ರಕಾಶ್, ಶ್ರೀದೇವಿ ಸಂಭ್ರಮದ ಸಂಯೋಜಕ ಅಶ್ವಿನ್ ಸಿಕ್ವೇರ, ಎಚ್ಲಾನ್‌ ಸಂಯೋಜಕ ವೆಂಕಟೇಶ್‍ ಎ.ಎಸ್. ಹಾಗೂ ಮೇಧಾ ಸಂಯೋಜಕಿ ಡಾ.ಪಿ.ಎಸ್. ನೇತ್ರಾವತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.