ADVERTISEMENT

ಮಾರ್ಗದರ್ಶಕರ ನಿರೀಕ್ಷೆಯಲ್ಲಿ ‘ಸೃಷ್ಟಿ ಲ್ಯಾಬ್‌’

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಆರು ಪಿಎಂಶ್ರೀ ಶಾಲೆಗಳಿಗೆ ದೊರೆತ ಸೌಲಭ್ಯ

ಸಂಧ್ಯಾ ಹೆಗಡೆ
Published 9 ಆಗಸ್ಟ್ 2025, 4:16 IST
Last Updated 9 ಆಗಸ್ಟ್ 2025, 4:16 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರು ಶಾಲೆಗಳಿಗೆ ‘ಸೃಷ್ಟಿ ಟಿಂಕರಿಂಗ್ ಲ್ಯಾಬ್’ ಮಂಜೂರು ಆಗಿದ್ದು, ಪ್ರಯೋಗಾಲಯ ಸಿದ್ಧವಾಗಿರುವ ಶಾಲೆಗಳು ಮಾರ್ಗದರ್ಶಕರಿಗಾಗಿ (ಮೆಂಟರ್‌) ಕಾಯುತ್ತಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2024– 25ನೇ ಸಾಲಿನಲ್ಲಿ ಈ ಪ್ರಯೋಗಾಲಯಗಳು ಮಂಜೂರು ಆಗಿವೆ. ಬಂಟ್ವಾಳ ತಾಲ್ಲೂಕಿನ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆ ಕೆಪಿಎಸ್, ಪುತ್ತೂರು ತಾಲ್ಲೂಕಿನ ಕೆಯ್ಯೂರು ಕೆಪಿಎಸ್, ಉಪ್ಪಿನಂಗಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರ್ಕಾರಿ ಪದವಿಪೂರ್ವ ಕಾಲೇಜು, ಸುಳ್ಯ ತಾಲ್ಲೂಕಿನ ಬೆಳ್ಳಾರೆ ಕೆಪಿಎಸ್, ಸುಳ್ಯದ ದ.ಕ. ಜಿಲ್ಲಾ ಪಂಚಾಯಿತಿ ಪದವಿಪೂರ್ವ ಕಾಲೇಜುಗಳು ಈ ಪ್ರಯೋಗಾಲಯವನ್ನು ಪಡೆದಿವೆ.

ಪ್ರತಿ ಶಾಲೆಗೆ ₹8 ಲಕ್ಷ ವೆಚ್ಚದ ಪ್ರಯೋಗಾಲಯ ಸಾಮಗ್ರಿ ಒದಗಿಸಲಾಗಿದೆ. ಶಾಲೆಯಲ್ಲಿ ಹಾಲಿ ಇರುವ ಒಂದು ಕೊಠಡಿಯನ್ನು ಈ ಪ್ರಯೋಗಾಲಯಕ್ಕೆ ಮೀಸಲಿಟ್ಟು, ಅಲ್ಲಿ ಎಲ್ಲ ವಿಜ್ಞಾನ ಸಾಮಗ್ರಿ ಜೋಡಿಸಲಾಗಿದೆ. ಎಲೆಕ್ಟ್ರಾನಿಕ್ಸ್, ರೊಬೊಟಿಕ್ಸ್, ಸೆನ್ಸರ್ಸ್‌, ಕ್ಷಿಪ್ರ ಮೂಲಮಾದರಿ ಪರಿಕರಗಳು, ಯಾಂತ್ರಿಕ, ವಿದ್ಯುತ್ ಮತ್ತು ಅಳತೆ ಉಪಕರಣಗಳು, ವಿದ್ಯುತ್ ಸರಬರಾಜು ಮತ್ತು ಪರಿಕರಗಳು ಮತ್ತು ಸುರಕ್ಷತಾ ಉಪಕರಣಗಳು, ಕಲೆ ಮತ್ತು ಕರಕುಶಲ ಕೌಶಲ, ಸಿವಿಲ್ ವರ್ಕ್‌ ಹೀಗೆ ಒಟ್ಟು ಆರು ಮುಖ್ಯ ವಿಭಾಗಗಳಲ್ಲಿ 300ಕ್ಕೂ ಹೆಚ್ಚು ವೈಜ್ಞಾನಿಕ ಉಪಕರಣಗಳು ಇವೆ.

ADVERTISEMENT

‘ಕೆಪಿಎಸ್ ಶಾಲೆಗಳಲ್ಲಿ ಪ್ರವೇಶಕ್ಕೆ ಪೈಪೋಟಿ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕೊಠಡಿ ಹೊಂದಾಣಿಕೆ ಮಾಡಿಕೊಂಡು, ಪ್ರಯೋಗಾಲಯಕ್ಕೆ ಒಂದು ಕೊಠಡಿ ಮೀಸಲಿಡಲಾಗಿದೆ. ಅವುಗಳ ಬಳಕೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ, ಅಲ್ಲಿ ಎಲ್ಲ ಸಾಮಗ್ರಿ ಜೋಡಿಸಿ, ಬೀಗ ಹಾಕಿ ಇಡಲಾಗಿದೆ’ ಎಂದು ಪ್ರಯೋಗಾಲಯ ದೊರೆತಿರುವ ಶಾಲೆಯ ಶಿಕ್ಷಕರೊಬ್ಬರು ತಿಳಿಸಿದರು.

‘ಪ್ರಯೋಗಾಲಯಕ್ಕೆ ಅಗತ್ಯ ಇಂಟರ್‌ನೆಟ್ ಸಂಪರ್ಕವನ್ನು ಬಹುತೇಕ ಶಾಲೆಗಳು ಮಾಡಿಕೊಂಡಿವೆ. ವೈಜ್ಞಾನಿಕ ಉಪಕರಣಗಳನ್ನು ಬಳಕೆ ಮಾಡದೆ ಬಹುಕಾಲ ಇಟ್ಟರೆ ದಕ್ಷತೆ ಕಡಿಮೆಯಾಗುತ್ತದೆ. ಆದಷ್ಟು ಶೀಘ್ರ ಪ್ರಯೋಗಾಲಯ ಪ್ರಾರಂಭವಾದರೆ, 10ನೇ ತರಗತಿಯಲ್ಲಿರುವ ಮಕ್ಕಳಿಗೂ ಅನುಕೂಲವಾಗುತ್ತದೆ. ವಿಳಂಬವಾದರೆ, ಪರೀಕ್ಷೆ ಸಿದ್ಧತೆ ಕಾರಣಕ್ಕೆ ಅವರು ಈ ಸೌಲಭ್ಯದಿಂದ ವಂಚಿತರಾಗುವ ಸಂದರ್ಭ ಇರುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.