ADVERTISEMENT

ಗುರಿ ತಲುಪುವ ಹಂಬಲ ಇರಲಿ: ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಅಧಿಕಾರಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 3:07 IST
Last Updated 21 ಫೆಬ್ರುವರಿ 2025, 3:07 IST
ಲಕ್ಷ್ಮಿನಾರಾಯಣ 
ಲಕ್ಷ್ಮಿನಾರಾಯಣ     

ಮಂಗಳೂರು: ಪರೀಕ್ಷೆ ಎನ್ನುವುದು ವರ್ಷವಿಡೀ ಕಲಿತ ವಿಷಯಗಳನ್ನು ಒರೆಗೆ ಹಚ್ಚುವ ಸಂದರ್ಭ. ಶಾಲೆಯಲ್ಲಿ ಕಲಿತಿದ್ದನ್ನು ಪುನರ್ಮನನ ಮಾಡುವ ಹಬ್ಬ. ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ. ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಚೆನ್ನಾಗಿ ಓದಿ, ಗುರಿ ತಲುಪುವ ಹಂಬಲ ಇರಲಿ. ಪ್ರತಿ ಅರ್ಧಗಂಟೆಗೊಮ್ಮೆ ಐದು ನಿಮಿಷ ಬಿಡುವು ಪಡೆದು, ಮತ್ತೆ ಓದಲು ಕುಳಿತುಕೊಳ್ಳಿ. ತಾಸಿಗೊಮ್ಮೆ ಒಂದು ಲೋಟ ನೀರು ಕುಡಿಯಲು ಮರೆಯಬೇಡಿ...

ಶಿಕ್ಷಣಾಧಿಕಾರಿ ಮತ್ತು ಎಸ್‌ಎಸ್ಎಲ್‌ಸಿ ದಕ್ಷಿಣ ಕನ್ನಡ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಲಕ್ಷ್ಮಿನಾರಾಯಣ ಹಾಗೂ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಸುಮಂಗಲಾ ನಾಯಕ್ ಅವರು ಈ ಬಾರಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಹೇಳಿದ ಕಿವಿಮಾತುಗಳಿವು.

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತು ಮಾರ್ಗದರ್ಶನ ಮಾಡಲು ‘ಪ್ರಜಾವಾಣಿ’ ಗುರುವಾರ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಅದರ ಆಯ್ದ ಭಾಗ ಇಲ್ಲಿದೆ.*ಶರಣ್ಯ, ಗುರುಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಹೇಗೆ ನಡೆಸಬೇಕು?

ADVERTISEMENT

 ಶರಣ್ಯ, ಗುರುಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಹೇಗೆ ನಡೆಸಬೇಕು?

ಪರೀಕ್ಷೆ ಸಮೀಪಿಸುತ್ತಿದ್ದು, ಲಭ್ಯ ಇರುವ ದಿನಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಶಿಕ್ಷಕರು ತಿಳಿಸಿರುವ ಮಹತ್ವದ ವಿಷಯಗಳನ್ನು ಬರೆದಿಟ್ಟುಕೊಂಡು ಮನನ ಮಾಡಬೇಕು. ಕಠಿಣ ಎನಿಸುವ ವಿಷಯಕ್ಕೆ ತುಸು ಹೆಚ್ಚು ಸಮಯ ಮೀಸಲಿಟ್ಟರೆ ಒಳ್ಳೆಯದು. ಪ್ರತಿದಿನ ಶಾಲೆಗಳಲ್ಲಿ ಶಿಕ್ಷಕರು ಪುನರ್ಮನನ ತರಗತಿ ನಡೆಸುವುದರಿಂದ ತಪ್ಪದೇ ಶಾಲೆಗೆ ಹೋಗಬೇಕು.

 ಆಸ್ಮಾ, ಮಂಗಳೂರು: ಪರೀಕ್ಷೆಯ ವೇಳೆ ವಿದ್ಯಾರ್ಥಿಯ ದಿನಚರಿ ಹೇಗಿರಬೇಕು?

–ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಬೇಕು. ದಿನಕ್ಕೆ ಆರೂವರೆ ತಾಸು ನಿದ್ದೆ ಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಮಕ್ಕಳಲ್ಲಿ ಹೆಚ್ಚಿನವರು ನೀರು ಕುಡಿಯಲು ಮರೆಯುತ್ತಾರೆ. ಇದರಿಂದ ದೇಹ ನಿರ್ಜಲೀಕರಣ ಗೊಳ್ಳುತ್ತದೆ. ಹೆಚ್ಚು ನೀರು ಕುಡಿಯಬೇಕು. ಈ ಎಲ್ಲ ದಿನಚರಿಗಳ ಜೊತೆ ಸಮಯ ವ್ಯರ್ಥ ಮಾಡದೆ ಎಲ್ಲ ವಿಷಯಗಳನ್ನು ಓದಬೇಕು.

ವೀಣಾ ಕಲ್ಲಡ್ಕ: ಕೆಲವು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದಿದ್ದಾರೆ. ವಿಜ್ಞಾನ ವಿಷಯ ಅವರಿಗೆ ಕಠಿಣ. ಉತ್ತೀರ್ಣಗೊಳ್ಳುವಷ್ಟು ಅಂಕ ಪಡೆಯಲು ಯಾವ ತಂತ್ರ ರೂಪಿಸಬಹುದು?

–ವಿಜ್ಞಾನ ವಿಷಯ ಪಾಸು ಮಾಡುವುದು ಸುಲಭ. ಪಠ್ಯಕ್ರಮದಲ್ಲಿರುವ ಚಿತ್ರಗಳನ್ನು ಬಿಡಿಸಿ ಭಾಗಗಳನ್ನು ಗುರುತಿಸುವುದನ್ನು ಕಲಿಸಿ. ದೊಡ್ಡ ಗಾತ್ರದ ಚಿತ್ರಗಳನ್ನು ಬೋರ್ಡ್‌ ಮೇಲೆ ಬಿಡಿಸಿ, ಪ್ರತಿ ಭಾಗದ ವಿವರಣೆ ನೀಡಿದಾಗ ಅದು ಅವರ ಸ್ಮರಣೆಯಲ್ಲಿ ಉಳಿದುಕೊಳ್ಳುತ್ತದೆ. ಜೊತೆಗೆ ಒಂದು ಅಂಕದ ಪ್ರಶ್ನೆಗಳಿಗೆ ಮಕ್ಕಳನ್ನು ಅಣಿಗೊಳಿಸಿದರೆ, ಪಾಸಾಗುವಷ್ಟು ಅಂಕ ಪಡೆಯುವುದು ಕಷ್ಟ ಆಗಲಾರದು.

ಅಮೃತ್ ಪ್ರಭು, ಗಂಜಿಮಠ: ಪರೀಕ್ಷಾ ಭಯ ಹೋಗಲಾಡಿಸುವುದು ಹೇಗೆ?

–ಮಕ್ಕಳಲ್ಲಿರುವ ಪರೀಕ್ಷಾ ಭಯ ದೂರ ಮಾಡಲು ವಿವಿಧ ಹಂತಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಈ ಬಾರಿ ಪರೀಕ್ಷಾ ಕೇಂದ್ರ ಇರುವ ಶಾಲೆಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳೆಯೇ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಆ ಮೂಲಕ, ಮಕ್ಕಳು ಸಹಜ ವಾತಾವರಣದಲ್ಲಿ ಅಂತಿಮ ಪರೀಕ್ಷೆ ಬರೆಯಲು ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ.

ರಮ್ಯಾ ಕುಲಶೇಖರ: ಬೋರ್ಡ್ ಪರೀಕ್ಷೆ ಆಗಿರುವ ಕಾರಣ ಮಕ್ಕಳಿಗೆ ಭಯವಾಗುತ್ತಿದೆ...

–ನಾವು ಹಿರಿಯರು ಮಕ್ಕಳಲ್ಲಿ ಧೈರ್ಯ ತುಂಬುವ, ಪ್ರೋತ್ಸಾಹಿಸುವ ಮಾತನ್ನಾಡಿ ಬೆನ್ನು ತಟ್ಟಬೇಕು. ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಮಾಡಬೇಕು. ನಾವೇ ವಿನಾಕಾರಣ ಭಯ ಸೃಷ್ಟಿಸಬಾರದು.

ಶ್ರುತಿ ವಿಟ್ಲ: ವಿಜ್ಞಾನ ವಿಷಯದ ಓದು ಹೇಗಿರಬೇಕು?

–ವಿಜ್ಞಾನದಲ್ಲಿ ಆಕೃತಿಗಳ ಭಾಗಗಳ ಗುರುತಿಸುವಿಕೆ ಸಮರ್ಪಕವಾಗಿರಲಿ. 15 ಅಂಕ ಚಿತ್ರಕ್ಕೆ ಮೀಸಲಿರುತ್ತದೆ. ನಾಲ್ಕು ಮಾದರಿ ಪ್ರಶ್ನೆಪತ್ರಿಕೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ. ಅದರಲ್ಲಿ ಎಲ್ಲ ವಿಷಯಗಳೂ ಅಡಕವಾಗಿರುತ್ತವೆ.

ಪ್ರಮೀಳಾ ಸುಳ್ಯ: ಆಕಾಶವಾಣಿ ಬಾನೂಲಿ ಕಾರ್ಯಕ್ರಮದಲ್ಲಿ ಬರುವ ಪಾಠಗಳು ಚೆನ್ನಾಗಿರುತ್ತವೆ. ಎಲ್ಲರಿಗೂ ಅದು ಲಭ್ಯವಾಗುವಂತೆ ಮಾಡಿದರೆ ಉತ್ತಮ.

– ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಧನ್ಯವಾದಗಳು.

ಅನನ್ಯ ಸುಬ್ರಹ್ಮಣ್ಯ: ಓದಿನಲ್ಲಿ ಲಕ್ಷ್ಯ ಕೇಂದ್ರೀಕರಿಸುವುದು ಹೇಗೆ?

– ಓದುವಾಗ ಟೆನ್ಶನ್ ಆದರೆ, ಐದು ಬಾರಿ ದೀರ್ಘ ಶ್ವಾಸೋಚ್ವಾಸ ಮಾಡಬೇಕು. ಉಸಿರಾಟ ಸ್ಥಿಮಿತಕ್ಕೆ ಬಂದಾಗ ಒತ್ತಡ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಆಗ ಓದಿನಲ್ಲಿ ಮನಸ್ಸನ್ನು ಕೇಂದ್ರೀಕರಿಸಬಹುದು.

ವೈಭವ್ ಕೊಂಬೆಟ್ಟು, ಆರ್ಷಿಯಾ: ಪೂರ್ಣ ಅಂಕ ಪಡೆಯುವುದು ಹೇಗೆ?

– ಪೂರ್ಣ ಅಂಕ ಪಡೆಯಲು ಕಠಿಣ ಅಭ್ಯಾಸ, ಪಠ್ಯಪುಸ್ತಕದ ಸಮಗ್ರ ಓದು ಇರಬೇಕು. ಮಾದರಿ ಪ್ರಶ್ನೆಪತ್ರಿಕೆ, ಪೂರ್ವಸಿದ್ಧತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಪ್ರತಿ ಪ್ರಶ್ನೆಯನ್ನು ಬಿಡಿಸಬೇಕು.

ಸುನೀತಾ ಕೆಮ್ರಾಲ್ ಮತ್ತು ರೋಷನ್, ಭವ್ಯಾ ಕೊಂಬೆಟ್ಟು: ಬೇರೆ ಬೇರೆ ಮಾದರಿಯ ಪ್ರಶ್ನೆಪತ್ರಿಕೆಗಳು ಇವೆ. ಯಾವುದನ್ನು ಬಿಡಿಸಬೇಕು?

–ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ನಾಲ್ಕು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ. ಅವುಗಳಲ್ಲಿ ಎಲ್ಲ ಮಾದರಿ ಪ್ರಶ್ನೆಗಳು ಇರುತ್ತವೆ.

ಸ್ನೇಹಾ: ಈ ಬಾರಿ ಗ್ರೇಸ್ ಅಂಕ ಸಿಗುತ್ತದೆಯೇ?

– ಇಲ್ಲ, ಈ ಬಾರಿ ಗ್ರೇಸ್ ಅಂಕ ನೀಡುವ ಪದ್ಧತಿ ಕೈ ಬಿಡಲಾಗಿದೆ.

ಆವಂತಿ:  ಪತ್ರ ಬರವಣಿಗೆ ಪ್ರಶ್ನೆಯಲ್ಲಿ ಅಂಕ ಕಳೆದು ಹೋಗುತ್ತದೆ. ಪೂರ್ಣ ಅಂಕ ಪಡೆಯುವುದು ಹೇಗೆ?

–ಪತ್ರ ಬರವಣಿಗೆಗೆ ಬೇರೆ ಬೇರೆ ಮಾದರಿಗಳಿದ್ದು, ಶಾಲೆಯಲ್ಲಿ ಕಲಿಸಿರುತ್ತಾರೆ. ಅವುಗಳನ್ನು ಸರಿಯಾಗಿ ಅಧ್ಯಯನ ಮಾಡಿಕೊಳ್ಳಿ.

ಪೂರ್ವಿ ಸಿದ್ಧಕಟ್ಟೆ: ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವುದು ಹೇಗೆ?

–ಮಾದರಿ ಪ್ರಶ್ನೆಪತ್ರಿಕೆಯ ಪ್ರತಿ ಪ್ರಶ್ನೆಯನ್ನು ಬಿಡಿಸಿ. ಅದೇ ಮಾದರಿಯಲ್ಲಿ ಅಂತಿಮ ಪರೀಕ್ಷೆಯ ಪ್ರಶ್ನೆಗಳು ಇರುತ್ತವೆ.

ನಿರೀಕ್ಷಾ ಪುತ್ತೂರು, ಹರ್ಷಿತಾ, ನಿಶಾ ಪುತ್ತೂರು, ಭೂಮಿಕಾ: ವಿಜ್ಞಾನ, ಗಣಿತದ ಸಮಸ್ಯೆಗಳನ್ನು ಎಷ್ಟು ಬಾರಿ ಓದಿದರೂ ನೆನಪಿರುವುದಿಲ್ಲ..

– ಒಮ್ಮೆ ಓದಿ, ಪುಸ್ತಕ ಮಡಚಿಟ್ಟು, ಎಲ್ಲವನ್ನೂ ನೆನಪಿಸಿಕೊಳ್ಳಿ. ನೆನಪಿನಲ್ಲಿ ಉಳಿಯುವುದಿಲ್ಲ ಅನ್ನಿಸಿದರೆ ಓದಿ ಆದ ಮೇಲೆ ಬರೆಯುವುದನ್ನು ರೂಢಿಸಿಕೊಳ್ಳಿ. ಚಿತ್ರ ಬಿಡಿಸುವಾಗ ಅದರ ಕಲ್ಪನೆಯನ್ನು ಮನದಲ್ಲಿ ಅರಳಿಸಿಕೊಳ್ಳಿ.

ವೈಷ್ಣವಿ: ಹಿಂದಿ ವಿಷಯ ಓದಲು ಕಷ್ಟವಾಗುತ್ತಿದೆ..

– ಹಿಂದಿ ಲಿಪಿಯನ್ನು ಸರಿಯಾಗಿ ಬರೆಯಲು ಮತ್ತು ಓದಲು ಗೊತ್ತಿರಬೇಕು. ಎಂಟು ಪಾಠ ಮತ್ತು ಎಂಟು ಪದ್ಯಗಳು ಇವೆ. ಸರಿಯಾಗಿ ಓದಿಕೊಂಡರೆ ಪರೀಕ್ಷೆಯಲ್ಲಿ ಬರೆಯುವುದು ಸುಲಭ.

ಜಿ.ಕೆ.ಭಟ್: ಪ್ರಶ್ನೆಪತ್ರಿಕೆಯನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?

– ರಾಜ್ಯಮಟ್ಟದಲ್ಲಿ ತಜ್ಞರು ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ. ಮಕ್ಕಳಿಗೆ ಪರೀಕ್ಷೆ ಸುಲಭವಾಗಬೇಕೆಂಬ ಕಾರಣಕ್ಕೆ ಪೂರ್ವಭಾವಿಯಾಗಿ ಮಕ್ಕಳಿಗೆ ಮಾದರಿ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ.

ಜಯಪ್ರಕಾಶ್ ಎಕ್ಕೂರು: ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುತ್ತಿದ್ದೀರಿ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಹೇಗೆ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸುವುದು?

– ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಇದ್ದಲ್ಲಿ, ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಪಾಠಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ.

ಸುಮಂಗಲಾ ನಾಯಕ್

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳು

ಬ್ಲಾಕ್ ಹೆಸರು;ಶಾಲಾ ವಿದ್ಯಾರ್ಥಿಗಳು;ಖಾಸಗಿ ಅಭ್ಯರ್ಥಿಗಳು;ಶಾಲಾ ಪುನರಾವರ್ತಿತರು;ಖಾಸಗಿ ಪುನರಾವರ್ತಿತರು;ಒಟ್ಟು ಬಂಟ್ವಾಳ;5792;120;58;37;6007 ಬೆಳ್ತಂಗಡಿ;4092;71;26;26;15;4204 ಮಂಗಳೂರು ಉತ್ತರ;5094;219;39;90;5442 ಮಂಗಳೂರು ದಕ್ಷಿಣ;4892;206;52;26;5176 ಮೂಡುಬಿದಿರೆ;1918;45;30;13;2006 ಪುತ್ತೂರು;4776;99;29;22;4926 ಸುಳ್ಯ;1882;71;25;14;1992 ಒಟ್ಟು;28446;831;259;217;29753

ಜ್ಞಾನ ಸಿಂಚನ ಸರಣಿ

ಜಿಲ್ಲಾ ಪಂಚಾಯಿತಿಯ ಸ್ಟುಡಿಯೊ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಲೈವ್ ಪಾಠ ಮಾಡುವ ‘ಜ್ಞಾನ ಸಿಂಚನ’ ಸರಣಿಯನ್ನು ಡಿಸೆಂಬರ್ 19ರಿಂದ ಆರಂಭಿಸಲಾಗಿದೆ. ಪ್ರತಿದಿನ ಸಂಜೆ 4ರಿಂದ 5 ಗಂಟೆಯವರೆಗೆ ತಜ್ಞ ಶಿಕ್ಷಕರು ವಿಷಯವಾರು ಪಾಠ ಮಾಡುತ್ತಾರೆ. ನೆಟ್‌ವರ್ಕ್ ಸಿಗದ ಪ್ರದೇಶಗಳ ಶಾಲೆಗಳಿಗೆ ಇದರ ಮುದ್ರಿತ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಫೆ.21ರಿಂದ ‘ಸ್ಕೋರಿಂಗ್ ಸರಣಿ’ ಪ್ರಾರಂಭಿಸಲಾಗುತ್ತಿದೆ ಎಂದು ಲಕ್ಷ್ಮಿನಾರಾಯಣ ಹೇಳಿದರು.

ಮೊದಲನೇ ಸ್ಥಾನದ ಗುರಿ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಗುರಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜೂನ್‌ ತಿಂಗಳಿನಿಂದಲೇ ಇದಕ್ಕೆ ಪ್ರಯತ್ನ ಪ್ರಾರಂಭವಾಗಿದ್ದು ಡಿಸೆಂಬರ್ ಒಳಗೆ ಪಠ್ಯದ ಪಾಠಗಳನ್ನು ಪೂರ್ಣಗೊಳಿಸಿ ಜನವರಿಯಿಂದ ಪುನರಾವರ್ತನೆ ಮಾಡಲಾಗುತ್ತಿದೆ. ನಿಗದಿತವಾಗಿ ಮಗುವಿನ ಪ್ರಗತಿ ಪರಿಶೀಲನೆ ದತ್ತು ಕಾರ್ಯಕ್ರಮ ಪರೀಕ್ಷಾ ಮಂಡಳಿಯ 20 ಅಂಶಗಳ ಕಾರ್ಯಕ್ರಮ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಸುಮಂಗಲಾ ನಾಯಕ್ ಹೇಳಿದರು.

ವಿಶೇಷ ಸವಲತ್ತು

ಮಗುವಿಗೆ ಯಾವುದೇ ನ್ಯೂನತೆ ದೃಷ್ಟಿದೋಷ ಶೇ 40ಕ್ಕಿಂತ ಹೆಚ್ಚು ಇದ್ದು ಅದಕ್ಕೆ ವೈದ್ಯಕೀಯ ಪ್ರಮಾಣಪತ್ರ ಇದ್ದರೆ ಅಂತಹ ಮಕ್ಕಳಿಗೆ ಪರೀಕ್ಷೆಯ ವೇಳೆ ವಿಶೇಷ ಸವಲತ್ತನ್ನು ಇಲಾಖೆ ಕಲ್ಪಿಸುತ್ತದೆ. ಎರಡು ಭಾಷಾ ವಿಷಯಗಳ ವಿನಾಯಿತಿ ಬರವಣಿಗೆ ಸಮಸ್ಯೆ ಇದ್ದಲ್ಲಿ ಒಬ್ಬರು ಸಹಾಯಕರನ್ನು ಒದಗಿಸಲಾಗುತ್ತದೆ. ಈ ಬಾರಿ ಇಂತಹ 684 ಮಕ್ಕಳ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಲಕ್ಷ್ಮಿನಾರಾಯಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.