ADVERTISEMENT

ಅಪಘಾತ: ಆಂಬುಲೆನ್ಸ್‌ನಲ್ಲಿ ಬಂದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:37 IST
Last Updated 12 ಏಪ್ರಿಲ್ 2022, 5:37 IST
ಗಾಯಗೊಂಡಿರುವ ತನ್ವಿ ಆಂಬುಲೆನ್ಸ್‌ನಲ್ಲಿ ಪರೀಕ್ಷೆಗೆ ಬಂದಿರುವುದು
ಗಾಯಗೊಂಡಿರುವ ತನ್ವಿ ಆಂಬುಲೆನ್ಸ್‌ನಲ್ಲಿ ಪರೀಕ್ಷೆಗೆ ಬಂದಿರುವುದು   

ಬೆಳ್ತಂಗಡಿ: ಎಸ್ಸೆಸ್ಸೆಲ್ಸಿಯ ವಿಜ್ಞಾನ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅಪಘಾತದಿಂದ ಗಾಯಗೊಂಡು, ಬಳಿಕ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು, ಸ್ಟ್ರೆಚರ್‌ನಲ್ಲಿ ಮಲಗಿಯೇ ಸಹಾಯಕಿಯ ಮೂಲಕ ಪರೀಕ್ಷೆ ಎದುರಿಸಿದ್ದಾಳೆ.

ಲಾಯಿಲ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ತನ್ವಿ (15) ಸೋಮವಾರ ಪರೀಕ್ಷೆ ಬರೆಯಲು ತಾಯಿ ಮಮತಾ ಜತೆ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಸ್ಕೂಟರ್‌ ಪಲ್ಟಿಯಾಗಿ ತನ್ವಿಯ ಕೈ, ಕಾಲು ಮತ್ತು ಮುಖಕ್ಕೆ ಗಾಯವಾಗಿದೆ. ತಕ್ಷಣ ಆಕೆಯನ್ನು ಉಜಿರೆಯ ಬೆನಕ‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.

ಆಕೆ ಓದುತ್ತಿದ್ದ ಶಾಲೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿ, 9ನೇ ತರಗತಿಯ ವಿದ್ಯಾರ್ಥಿನಿಯ ಸಹಾಯದಲ್ಲಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಂದ ವಿಶೇಷ ಅನುಮತಿ ದೊರಕಿಸಿಕೊಟ್ಟಿದ್ದಾರೆ. ಬಳಿಕ ಉಜಿರೆ ಬೆನಕ ಆಸ್ಪತ್ರೆಯ ಮುಖ್ಯಸ್ಥ ಡಾ.ಗೋಪಾಲಕೃಷ್ಣ ಅವರು ಇಬ್ಬರು ಸಿಬ್ಬಂದಿಯ ಜತೆ ಆಂಬುಲೆನ್ಸ್‌ನಲ್ಲಿ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ.

ADVERTISEMENT

ಬೆಳಿಗ್ಗೆ 11.45ರಿಂದ 2.45 ಗಂಟೆವರೆಗೆ ವಿದ್ಯಾರ್ಥಿನಿ ಪರೀಕ್ಷೆ ಎದುರಿಸಿದ್ದು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.