ADVERTISEMENT

ಯುವ ಮನಸುಗಳಲ್ಲಿ ಕಲಾಭಿರುಚಿ ಬೆಳೆಸಿ: ನಟ ಪ್ರಕಾಶ್ ರಾಜ್ ಸಲಹೆ

'ಬಿಯಾಂಡ್ ದಿ ಸ್ಕೋರ್ - ರಿದಂ' ಕಾರ್ಯಾಗಾರಕ್ಕೆ ಚಾಲನೆ ನೀಡಿದ ನಟ ಪ್ರಕಾಶ್ ರಾಜ್ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 4:58 IST
Last Updated 3 ಜನವರಿ 2025, 4:58 IST
ಕಾರ್ಯಾಗಾರಕ್ಕೆ ನಟ ಪ್ರಕಾಶ್‌ ರಾಜ್‌ ಗುರುವಾರ ಚಾಲನೆ ನೀಡಿದರು. ಫಾ.ಪ್ರವೀಣ್ ಮಾರ್ಟಿಸ್‌ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಾಗಾರಕ್ಕೆ ನಟ ಪ್ರಕಾಶ್‌ ರಾಜ್‌ ಗುರುವಾರ ಚಾಲನೆ ನೀಡಿದರು. ಫಾ.ಪ್ರವೀಣ್ ಮಾರ್ಟಿಸ್‌ ಮತ್ತಿತರರು ಭಾಗವಹಿಸಿದ್ದರು.   

ಮಂಗಳೂರು: ‘ಕಲೆಯನ್ನು ಎಲ್ಲರೂ ಸೇರಿ ಸಂಭ್ರಮಿಸಬೇಕು. ಕಲೆಯ ಬಗ್ಗೆ ಯುವ ಮನಸ್ಸುಗಳಲ್ಲಿ ಅಭಿರುಚಿ, ನಂಬಿಕೆ, ಗ್ರಹಿಕೆಯನ್ನು ಬೆಳೆಸುವುದು ಮುಖ್ಯ’ ಎಂದು ಸಿನಿಮಾ ನಟ ಪ್ರಕಾಶ್ ರಾಜ್ ಹೇಳಿದರು.

ಇಲ್ಲಿನ ಸೇಂಟ್‌ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ನಾಲ್ಕು ದಿನ ನಡೆಯಲಿರುವ  'ಬಿಯಾಂಡ್ ದಿ ಸ್ಕೋರ್ - ರಿದಂ' ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾಲೇಜು ದಿನಗಳಲ್ಲಿ ಕನ್ನಡ ಅಧ್ಯಾಪಕರು ಪಾಠದ ಜೊತೆ ಪದ್ಯವನ್ನು ವಿಮರ್ಶಿಸುವುದು ಹೇಗೆಂಬುದನ್ನು ಕಲಿಸಿದ್ದರು. ನಾನು ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಲು ಇದು ಸಹಕಾರಿಯಾಯಿತು’ ಎಂದು ತಿಳಿಸಿದರು.

ADVERTISEMENT

‘ಕಲಾಭಿರುಚಿ ಬೆಳೆಸುವಲ್ಲಿ ಕಾಲೇಜುಗಳಲ್ಲಿ ನಡೆಸುವಂತಹ ಕಾರ್ಯಾಗಾರಗಳು ಪೂರಕ. ಸೇಂಟ್‌ ಅಲೋಶಿಯಸ್ ಕಾಲೇಜಿನಲ್ಲಿ ಇಂತಹ ಕಾರ್ಯಗಾರಗಳನ್ನು ಹಬ್ಬದ ರೀತಿ ಸಂಭ್ರಮಿಸಲಾಗುತ್ತದೆ’ ಎಂದರು.

ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಫಾ.ಪ್ರವೀಣ್ ಮಾರ್ಟಿಸ್, ‘ಮನದ ದನಿಯನ್ನು ಆಲಿಸಿ, ಅದರ ಲಯಕ್ಕೆ ತಕ್ಕಂತೆ ನಡೆದರೆ ಬದುಕು ಸುಖಮಯವಾಗಬಲ್ಲುದು’ ಎಂದರು.

ನಾಲ್ಕು ದಿನಗಳ ಈ ಕಾರ್ಯಾಗಾರದಲ್ಲಿ ಸಂಗೀತ ಪರಿಕರಗಳನ್ನು ನುಡಿಸುವುದನ್ನು ಕಲಿಸಲಾಗುತ್ತದೆ ಎಂದು ಅನುಷ್ ಶೆಟ್ಟಿ ತಿಳಿಸಿದರು.

ಕಾರ್ಯಾಗಾರದ ಸಂಯೋಜಕರಾದ ಕ್ರಿಸ್ಟೋಫರ್ ಡಿಸೋಜ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಂಠ ಸ್ವಾಮಿ, ಮುನ್ನಾ ಮೈಸೂರು, ಕೃಷ್ಣ ಚೈತನ್ಯ ಭಾಗವಹಿಸಿದ್ದರು. ಸ್ವೀಡಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ನೇತೃತ್ವದ 'ನಿರ್ದಿಗಂತ ’ ಜಂಟಿಯಾಗಿ ಏರ್ಪಡಿಸಿರುವ ‘ರಿದಂ' ಕಾರ್ಯಾಗಾರವು ಇದೇ 5ರವರೆಗೆ ನಡೆಯಲಿದೆ.

ಸೇಂಟ್‌ ಅಲೋಶಿಸಯಸ್ ಪ್ರಾಂಗಣದಲ್ಲಿ ಇದೇ 5ರವರೆಗೆ ನಡೆಯಲಿದೆ ಕಾರ್ಯಾಗಾರ ಸಂಗೀತ ಪರಿಕರ ನುಡಿಸುವುದನ್ನು ಕಲಿಸಲಿದ್ದಾರೆ ಪರಿಣಿತ ಕಲಾವಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.