ADVERTISEMENT

ಮನೆ–ಮನೆಗೆ ಸ್ಟಿಕರ್ ಅಭಿಯಾನ

ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:24 IST
Last Updated 6 ಡಿಸೆಂಬರ್ 2021, 16:24 IST

ಮಂಗಳೂರು: ‘ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಇಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದು ತಿಂಗಳು ಮನೆ–ಮನೆಯಲ್ಲಿ ಸ್ಟಿಕರ್ ಅಭಿಯಾನ ನಡೆಸಲಾಗುವುದು’ ಎಂದು ಬಿಲ್ಲವ ಬ್ರಿಗೇಡ್ ಸಂಘಟನೆಯ ಸ್ಥಾಪ‍ಕ ಅಧ್ಯಕ್ಷ ಅವಿನಾಶ್ ಸುವರ್ಣ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ವಿಷಯವನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡದಿದ್ದಲ್ಲಿ, ಅಭಿಯಾನ ಮುಗಿಸುವವರೆಗೆ ಕಾದು ನೋಡಿ, ನಂತರ ವಿಮಾನ ನಿಲ್ದಾಣದ ಎದುದು ಜನ ಸಮಾವೇಶ ನಡೆಸಲು ಯೋಚಿಸಲಾಗಿದೆ. ಈ ಮೂಲಕ ಬಿಲ್ಲವರ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದರು.

‘ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಬೇಕೆಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುದ್ರೋಳಿ ಕ್ಷೇತ್ರದಿಂದ ವಿಮಾನ ನಿಲ್ದಾಣದವರೆಗೆ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ವಿಧಾನಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದಿದ್ದರು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ನಮ್ಮ ಹೋರಾಟ ಯಾವುದೇ ಪಕ್ಷ ಅಥವಾ ಸರ್ಕಾರದ ವಿರುದ್ಧ ಅಲ್ಲ. ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು ಎಂಬುದಷ್ಟೇ ಉದ್ದೇಶ’ ಎಂದರು.

ADVERTISEMENT

ಬಿಲ್ಲವ ಬ್ರಿಗೇಡ್ ಕಾರ್ಯಾಧ್ಯಕ್ಷ ಕಿಶನ್ ಅಮೀನ್ ಕಾಟಿಪಳ್ಳ, ಪ್ರಮುಖರಾದ ಪ್ರಕಾಶ್ ಸನಿಲ್, ಪವನ್ ಸಾಲ್ಯಾನ್, ಪ್ರಶಾಂತ್ ಮಂಗಳಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.