ಮಂಗಳೂರು: ‘ದೇಶದಲ್ಲಿ ಗೋವುಗಳ ಹತ್ಯೆಯನ್ನು ಹಾಗೂ ಅವುಗಳನ್ನು ಹಿಂಸಾತ್ಮಕವಾಗಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಬಕ್ರೀದ್ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಗೋವುಗಳ ಹತ್ಯೆ ತಡೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳ ಒತ್ತಾಯಿಸಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ವಿಎಚ್‌ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್., ‘ರಾಜ್ಯದಲ್ಲಿ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆ ಜಾರಿಯಲ್ಲಿದ್ದು, ಅದರ ಪ್ರಕಾರ ಗೋಹತ್ಯೆ ನಡೆಸುವಂತಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ ಕೂಡಾ ಆದೇಶ ನೀಡಿದೆ. ಗೋವುಗಳನ್ನು ಸಾಗಿಸುವಾಗಲೂ ಭಾರತೀಯ ಪ್ರಾಣಿಗಳ ಕ್ಷೇಮಾಭಿವೃದ್ಧಿ ಮಂಡಳಿಯ ಸುತ್ತೋಲೆಯ ಅಂಶಗಳನ್ನು ಪಾಲಿಸಬೇಕು. ಜಿಲ್ಲೆಯ ಅಧಿಕಾರಿಗಳು ಈ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದರು.
‘ಕೇರಳದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದೆ ಜಾನುವಾರುಗಳನ್ನು ತಲಪಾಡಿಯ ರಕ್ಷಣೆ ಮಾಡಲು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ ರೆಡ್ಡಿ ಕ್ರಮ ಕೈಗೊಂಡಿಲ್ಲ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಶೇಟ್, ಬಜರಂಗದಳದ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಭಾಗವಹಿಸಿದ್ದರು.
‘ಅಮಾಯಕರ ಹತ್ಯೆಯನ್ನು ಸಮರ್ಥಿಸುವುದಿಲ್ಲ’
ವಿಎಚ್‌ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್ ‘ನಮ್ಮ ಸಂಘಟನೆ ಯಾವತ್ತೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಅಮಾಯಕರ ಹತ್ಯೆ ಸಮರ್ಥನೆ ಮಾಡುವುದಿಲ್ಲ. ಧರ್ಮ ಹಾಗೂ ರಾಷ್ಟ್ರೀಯತೆ ವಿಚಾರದಲ್ಲಿ ಸಂವಿಧಾನಬದ್ಧವಾಗಿ ಕೆಲಸ ಮಾಡುವ ಸಂಘಟನೆ ನಮ್ಮದು’ ಎಂದು ಸುನಿಲ್ ಕೆ.ಆರ್. ತಿಳಿಸಿದರು. ‘ಧರ್ಮ ರಕ್ಷಣೆಗಾಗಿ ಕೆಲಸ ಮಾಡುವವರಿಗೆ ತೊಂದರೆ ನೀಡಲಾಗುತ್ತಿದೆ. ಸಂಘಟನೆಯ ಪ್ರಮುಖರ ಮೇಲೆ ಇಲ್ಲಸಲ್ಲದ ಮೊಕದ್ದಮೆಗಳನ್ನು ದಾಖಲಿಸಿ ರೌಡಿಗಳ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗುತ್ತಿದೆ. ಕೆಲವರನ್ನು ಗಡೀಪಾರು ಮಾಡಲಾಗುತ್ತಿದೆ. ಸಿಕ್ಕ ಸಿಕ್ಕವರ ಮನೆಗೆ ಪೊಲೀಸರು ರಾತ್ರಿ ವೇಳೆ ಭೇಟಿ ನೀಡುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ. ನಮ್ಮ ತಾಳ್ಮೆಗೂ ಮಿತಿ ಇದೆ. ಸಹನೆಯ ಕಟ್ಟೆ ಒಡೆದರೆ ಇದಕ್ಕೆಲ್ಲ ತಕ್ಕ ಉತ್ತರ ನೀಡಬೇಕಾಗಬಹುದು’ ಎಂದು ತಿಳಿಸಿದರು. ‘ಗೋವುಗಳನ್ನು ಕದ್ದು ಹತ್ಯೆ ಮಾಡುವುದಕ್ಕೆ ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ‘ಲವ್ ಜಿಹಾದ್’ ನಡೆಸುವುದಕ್ಕೆ ನಿರ್ದಿಷ್ಟ ಸಮುದಾಯವು ಬೆಂಬಲ ನೀಡುತ್ತಿದೆ. ಅಂತಹ ಕೃತ್ಯದಲ್ಲಿ ತೊಡಗಿರುವವರನ್ನು ಪೊಲೀಸರು ಮೊದಲು ಪತ್ತೆ ಮಾಡಲಿ. ಈ ರೀತಿಯ ಹತ್ಯೆಯ ಮೂಲ ಏನು ಎಂಬುದನ್ನು ಕಂಡು ಹಿಡಿಯಲಿ. ಆದರೆ ಪೊಲೀಸರು ಅಂತಹವರ ಹೆಸರನ್ನು ರೌಡಿಗಳ ಪಟ್ಟಿಯಲ್ಲಿ ಸೇರಿಸುತ್ತಿಲ್ಲ’ ಎಂದು ಆರೋಪಿಸಿದರು. ‘ಪ್ರಚೋದನಾಕಾರಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳುವ ಮೂಲಕ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.