ADVERTISEMENT

‘ಹೋಮಿಯೋಪಥಿ ಅಪಪ್ರಚಾರ ತಡೆಯಿರಿ’

‘ಅಂತರ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಕಮಲಾಬಾಯಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:30 IST
Last Updated 15 ನವೆಂಬರ್ 2025, 6:30 IST
ಮಂಗಳೂರಿನ ಕಂಕನಾಡಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಅಂತರ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಆಯುಷ್ ಸಚಿವಾಲಯದ ಮಾಜಿ ಸಲಹೆಗಾರ ಡಾ.ಈಶ್ವರ್ ದಾಸ್ ಅವರನ್ನು ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರ 
ಮಂಗಳೂರಿನ ಕಂಕನಾಡಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಅಂತರ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಆಯುಷ್ ಸಚಿವಾಲಯದ ಮಾಜಿ ಸಲಹೆಗಾರ ಡಾ.ಈಶ್ವರ್ ದಾಸ್ ಅವರನ್ನು ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರ    

ಮಂಗಳೂರು: ‘ಹೋಮಿಯೋಪಥಿ ವೈದ್ಯ ಪದ್ಧತಿಯು ಅಲೋಪಥಿಯಷ್ಟು ಜನಪ್ರಿಯ ಆಗದೇ ಇರಲು ಅದರ ಕುರಿತ ಅಪಪ್ರಚಾರವೂ ಕಾರಣ. ಕೆಲ ಔಷಧ ಲಾಬಿಗಳು ಈಗಲೂ ಈ  ಕುರಿತು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿವೆ. ಈ ಪದ್ಧತಿ ಎಷ್ಟು ಪರಿಣಾಮಕಾರಿ ಎಂಬುದನ್ನು, ಆಧುನಿಕ ತಂತ್ರಜ್ಞಾನ ಬಳಸಿ ಪುರಾವೆ ಸಹಿತ ನಿರೂಪಿಸಬೇಕು’ ಎಂದು ರಾಜ್ಯ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕಮಲಬಾಯಿ ಬಿ. ಹೇಳಿದರು.

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಜಾಗತಿಕ ಹೋಮಿಯೋಪಥಿ ಪ್ರತಿಷ್ಠಾನದ ಫೌಂಡೇಷನ್ ಆಶ್ರಯದಲ್ಲಿ ಕಂಕನಾಡಿಯಲ್ಲಿ ಏರ್ಪಡಿಸಿದ್ದ ‘ಅಂತರ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ 'ಎಕ್ಸ್ ಫ್ಲೋರಾ-2025' ಅನ್ನು ಉದ್ಘಾಟಿಸಿ, ತಂತ್ರಾಂಶ ಬಿಡುಗಡೆ ಮಾಡಿ ಅವರು ಶುಕ್ರವಾರ ಮಾತನಾಡಿದರು.

‘ಹೋಮಿಯೋಪಥಿಯಲ್ಲಿ ಎಲ್ಲ ಔಷಧಗಳಿಗೂ ಸ್ಡಿರಾಯ್ಡ್ ಬಳಸಲಾಗುತ್ತದೆ, ಇದು ಸಣ್ಣ ಕಾಯಿಲೆಗೆ ಮಾತ್ರ ಪರಿಣಾಮಕಾರಿ, ದೊಡ್ಡ ಕಾಯಿಲೆ ವಾಸಿ ಮಾಡುವುದಿಲ್ಲ ಎಂಬೆಲ್ಲ ಆರೋಪಗಳು ಸುಳ್ಳು. ಯಾರೋ ಹೇಳಿದ್ದನ್ನು ಜನ ನಂಬಬಾರದು. ಈ ವೈದ್ಯ ಪದ್ಧತಿಯಲ್ಲಿ ಔಷಧೀಯ ನ್ಯಾನೊ‌ ಕಣಗಳು ಜೀವಕೋಶಗಳ ಹಂತದವರೆಗೆ ನುಸುಳಿ ರೋಗ ವಾಸಿ‌ಮಾಡಬಲ್ಲವು. ಅಡ್ಡ ಪರಿಣಾಮ ಇಲ್ಲದ ಹೋಮಿಯೋಪಥಿ ಚಿಕಿತ್ಸೆ ಎಷ್ಟು ಪರಿಣಾಮಕಾರಿ ಎಂಬುದನ್ನು ಪುರಾವೆ ಸಹಿತ ನಿರೂಪಿಸಲು ನ್ಯಾನೊ ತಂತ್ರಜ್ಞಾನ ನೆರವಾಗಲಿದೆ’ ಎಂದರು. 

ADVERTISEMENT

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ.ಫೌಸ್ತಿನ್ ಲ್ಯೂಕಸ್ ಲೋಬೊ, ‘ಪುರಾವೆ ಆಧಾರಿತ ಚಿಕಿತ್ಸೆಯೇ ಪ್ರಧಾನವಾದ ಹೋಮಿಯೋಪಥಿ  ಪದ್ಧತಿಯು  ಜ್ಞಾನ, ಅನುಭೂತಿ, ವಿಜ್ಞಾನ ಮತ್ತು ಸೇವೆಯ ದ್ಯೋತಕ. ಈಗ  ಸಾಮಾಜಿಕ ಮಾಧ್ಯಮಗಳಲ್ಲಿ ‘ಡಾ. ಗೂಗಲ್’ ಸಾಕಷ್ಟು ಪ್ರಚಾರದಲ್ಲಿದೆ. ರೋಗಗಳಿಗೆ ಜನರು ಸ್ವಯಂ ಔಷಧ ಕಂಡುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಅಗತ್ಯ ಇದೆ’ ಎಂದರು. 

ದಕ್ಷಿಣ ಆಫ್ರಿಕಾದ ಡರ್ಬನ್ ತಾಂತ್ರಿಕ ವಿಶ್ವವಿದ್ಯಾಲಯದ ಹೋಮಿಯೋಪಥಿ ವಿಭಾಗ ಮುಖ್ಯಸ್ಥೆ ಡಾ.ಆ್ಯಶ್ಲಿ ರೋಸ್ ಅವರು ಸಂಶೋಧನಾ ಸಂಚಿಕೆಯನ್ನು, ಯುಕೆ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್ ನಿರ್ದೇಶಕ ಡಾ.ಕಿಮ್ ಆಂಟೊನಿ ಜಾಬ್ಸ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. 

ಫಾದರ್‌ ಮುಲ್ಲರ್ಸ್‌ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ.ಡೊನಾಲ್ಡ್ ನೀಲೇಶ್‌ ಕ್ರಾಸ್ತ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಇಎಸ್‌ಜೆ ಪ್ರಭುಕಿರಣ್‌ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.