ADVERTISEMENT

‘ನಿಮ್ಮ ಶ್ರಮಕ್ಕೆ ನಮ್ಮ ಪ್ರಶಂಸೆ’

ಪೊಲೀಸರಿಗೆ ವಿದ್ಯಾರ್ಥಿಗಳ ಪ್ರಶಂಸಾ ಪತ್ರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 15:43 IST
Last Updated 10 ಜನವರಿ 2020, 15:43 IST
ಮಂಗಳೂರಿನಲ್ಲಿ ಎಸಿಪಿ ಎಂ.ಜಗದೀಶ್ ಅವರಿಗೆ ಜ್ಞಾನ ಸಂಜೀವಿನಿ ವಿದ್ಯಾರ್ಥಿಗಳ ತಂಡ ಪ್ರಶಂಸಾ ಪತ್ರ ನೀಡಿತು.
ಮಂಗಳೂರಿನಲ್ಲಿ ಎಸಿಪಿ ಎಂ.ಜಗದೀಶ್ ಅವರಿಗೆ ಜ್ಞಾನ ಸಂಜೀವಿನಿ ವಿದ್ಯಾರ್ಥಿಗಳ ತಂಡ ಪ್ರಶಂಸಾ ಪತ್ರ ನೀಡಿತು.   

ಮಂಗಳೂರು: ‘ನಮ್ಮ ಜೀವನದ ನಿಜವಾದ ಹೀರೋಗಳು ಪೊಲೀಸರು. ವೈಯಕ್ತಿಕ ಜೀವನವನ್ನು ಬದಿಗಿಟ್ಟು ಹಗಲು– ರಾತ್ರಿ ಕಷ್ಟಪಟ್ಟು ಶಾಂತಿಯನ್ನು ಕಾಪಾಡಲು ಶ್ರಮಿಸುತ್ತಾರೆ. ನೀವು ನಮಗೆ ಸ್ಪೂರ್ತಿ. ನಿಮ್ಮ ಶ್ರಮಕ್ಕೆ ನಮ್ಮ ಪ್ರಶಂಸೆ’ ಎಂದು ಜ್ಞಾನ ಸಂಜೀವಿನಿ’ ವಿದ್ಯಾರ್ಥಿಗಳ ತಂಡವೂ ಪೊಲೀಸರಿಗೆ ಪ್ರಶಂಸಾ ಪತ್ರ ನೀಡಿದೆ.

‘ನೀವು ನಿಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಕಾರ್ಯಾಚರಣೆ ಮಾಡುವ ಮೂಲಕ ಕಿಡಿಗೇಡಿಗಳನ್ನು ಹಿಡಿಯುತ್ತೀರಿ. ಪೊಲೀಸ್ ಇಲಾಖೆಯ ಮೇಲೆ ಇರುವ ಹಲವು ಖಂಡನೆಗಳ ಮಧ್ಯೆ ಇಂತಹದೊಂದು ಕಾರ್ಯಕ್ಕೆ ನಾವು ಮುಂದೆ ಬಂದಿದ್ದಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರ ಸ್ವೀಕರಿಸುವಾಗ ಅವರ ಮುಖದಲ್ಲಿದ್ದ ಮಂದಹಾಸವು ನಮಗೆ ನೆಮ್ಮದಿ ಹಾಗೂ ಸ್ಫೂರ್ತಿ ನೀಡಿತು’ ಎಂದು ತಂಡದ ಅರುಣ್ ಶೇಣವ ಹೇಳಿದರು.

‘ನಮ್ಮ ಊರನ್ನು ಕಾಯುವ ಹೀರೋಗಳಿಗೆ ನಮ್ಮ ಪ್ರಣಾಮಗಳು. ದೇಶದಲ್ಲಿ ಹಲವಾರು ದಿನಗಳಿಂದ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಮು ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಎಲ್ಲಿಯೂ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಗಲು-ರಾತ್ರಿ ಒಂದು ಮಾಡಿ ದುಡಿಯುತ್ತಿರುವ ನಿಮಗೆ ನಾವು ಸದಾ ಚಿರಋಣಿ’ ಎಂದು ಪ್ರಶಂಸಾ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

‘ಪ್ರಜ್ಞಾವಂತ ವಿದ್ಯಾರ್ಥಿಗಳಾದ ನಾವು ಹಲವು ದಿನಗಳ ಹಿಂದೆ ನಡೆದ ಪ್ರತಿಭಟನೆಯ ವಿಡಿಯೊ ತುಣುಕುಗಳನ್ನು ಸೂಕ್ಷ್ಮವಾಗಿ ನೋಡಿದಾಗ, ಪೊಲೀಸ್ ಇಲಾಖೆ ಅಂದು ತೆಗೆದುಕೊಂಡ ಎಲ್ಲ ನಿರ್ಧಾರಗಳು ಜನಪರವಾಗಿತ್ತು ಎಂದು ಎದ್ದು ಕಾಣುತ್ತದೆ. ಹಲವಾರು ಮಂದಿ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸುತ್ತಾರೆ. ಆದರೆ ನೀವು ಆ ರೀತಿಯ ನಿರ್ಧಾರ ತೆಗೆದಿದ್ದರೆ ಮಂಗಳೂರು ಎಂದಿಗೂ ಮರಳಿ ಹಿಂದಿನ ಪರಿಸ್ಥಿತಿಗೆ ಬರುತ್ತಿರಲಿಲ್ಲ ಎಂಬುದು ಅವರಿಗೆ ಅರಿವಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

‘ನೀವು ಒಂದು ಗುಂಡು ಹಾರಿಸುವ ಮೊದಲು ನೂರು ಬಾರಿ ಯೋಚಿಸುತ್ತೀರಿ. ನೀವು ಪೊಲೀಸ್ ಎಂಬುದು ನಂತರದ ವಿಷಯ. ಅದಕ್ಕಿಂತಲೂ ಮೊದಲು ನೀವು ಕೂಡ ಮನುಷ್ಯರು. ನಿಮ್ಮಲ್ಲಿ ಮನುಷ್ಯತ್ವ ಎಂಬುದು ಇದೆ ಎಂಬುದು ನಮ್ಮ ಮನದಲ್ಲಿದೆ. ನಿಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು, ಊರಿನ ರಕ್ಷಣೆ ಮಾಡುತ್ತಿರುವುದು ನಮ್ಮಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಗೆ ಸೇರಲು ಸ್ಫೂರ್ತಿಯಾಗಿದೆ’ ಎಂದು ಉಲ್ಲೇಖಿಸಲಾಗಿದೆ

ಎಸಿಪಿ ಎಂ.ಜಗದೀಶ್, ಎಎಸ್‌ಐ ಪ್ರದೀಪ್ ಟಿ.ಆರ್. ಅವರಿಗೆ ಜ್ಞಾನ ಸಂಜೀವಿನಿ ಟೀಂ ಪ್ರಶಂಸಾ ಪತ್ರ ನೀಡಿದರು. ಈ ಸಂದರ್ಭ ತಂಡದ ಅರುಣ್ ಶೇಣವ, ಸಾಕ್ಷಾತ್ ಶೆಟ್ಟಿ, ವಿನೀತ್ ಪುತ್ರನ್, ದೀಕ್ಷಿತ್ ಕುಲಾಲ್, ಶಿವಪ್ರಸಾದ್, ಜೀವನ್ ರೈ, ಸ್ವಸ್ತಿಕ್ ಆಳ್ವ, ಪ್ರಜ್ವಲ್ ಶೇಣವ, ಕೀರ್ತನ್ ದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.