ADVERTISEMENT

ದೇವಳಗಳಲ್ಲಿ ಸೇವೆ- ಸಿಎಂ ಜತೆ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 4:43 IST
Last Updated 14 ಜುಲೈ 2021, 4:43 IST
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಮಾತನಾಡಿದರು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಮಾತನಾಡಿದರು   

ಸುಬ್ರಹ್ಮಣ್ಯ: ದೇವಸ್ಥಾನಗಳಲ್ಲಿ ಭಕ್ತರಿಗೆ ಸೇವೆಗಳನ್ನು ಆರಂಭಿಸುವ ಬಗ್ಗೆಮುಂದಿನ ಸಚಿವ ಸಂಪುಟ ಸಭೆಗೆ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ‘ದೇವಸ್ಥಾನಗಳ ಬಳಿಯ ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಿರುವುದರಿಂದ ದೇವಸ್ಥಾನಗಳಲ್ಲೂ ಸೇವೆಗಳು ಹಾಗೂ ಭೋಜನ ಪ್ರಸಾದ ನೀಡಲು ಅವಕಾಶ ನೀಡುವಂತೆ ಭಕ್ತರು ಕೇಳಿಕೊಂಡಿದ್ದಾರೆ. ಕೋವಿಡ್‌ ಪಾಸಿಟಿವಿಟಿ ದರವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದದು.

ಕುಕ್ಕೆ ಸುಬ್ರಹ್ಮಣ್ಯದ ಟಾರ್ಪಾಲು ಹೊದಿಕೆಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸುತ್ತು ಪೌಳಿಯಲ್ಲಿ ಮಳೆ ನೀರು ಸೋರದಂತೆ ಟಾರ್ಪಾಲು ಹೊದಿಕೆ ಹಾಕಲಾಗಿದೆ. ಇಲ್ಲಿಯ ಹಲವಾರು ಪ್ರಕರಣಗಳು ಕೋರ್ಟ್‌ನಲ್ಲಿದೆ. ಕಾಮಗಾರಿಯು ಇಚ್ಛಾಶಕ್ತಿ ಕೊರತೆಯಿಂದ, ಆಡಳಿತ ವೈಫಲ್ಯದಿಂದ ನಿಂತಿಲ್ಲ. ಕೋರ್ಟ್‌ ಚೌಕಟ್ಟನ್ನು ಮೀರಿ ಏಕಾಏಕಿ ಕಾಮಗಾರಿ ನಿರ್ವಹಿಸುವುದು ಅಸಾಧ್ಯ. ಮಳೆ ನೀರು ಒಳ ಹೋಗದಂತೆ ಮಾಡಲು ತುರ್ತು ಕ್ರಮಕೈಗೊಳ್ಳಲಾಗುತ್ತದೆ. ಅದರ ದುರಸ್ತಿಗೆ ನಮ್ಮಲ್ಲಿ ಕ್ರಿಯಾ ಯೋಜನೆ ಸಿದ್ಧವಾಗಿದೆ. ಅನುದಾನವೂ ಇದೆ. ಕೋರ್ಟ್‌ ಅನುಮತಿ ನೀಡಿದಲ್ಲಿ ಕೂಡಲೇ ಮುಂದಿನ ಕಾಮಗಾರಿ ನಡೆಯಲಿದೆ. ಜತೆಗೆ ಯಾರೂ ಕೋರ್ಟ್‌ಗೆ ಹೋಗಿದ್ದಾರೆಯೋ ಅವರ ಜತೆ ಸಂಪರ್ಕಿಸಲು ತಯಾರಿದ್ದೇವೆ’ ಎಂದರು.

ADVERTISEMENT

ದೇವಸ್ಥಾನದ ಸಿಬ್ಬಂದಿಗೆ 6ನೇ ವೇತನ ನೀಡಬೇಕೆಂಬ ಬೇಡಿಕೆ ಇದೆ. ಶೇ 35ರಷ್ಟು ಸಿಬ್ಬಂದಿಯ ವೇತನ ಯಾವ ದೇವಸ್ಥಾನದಲ್ಲಿ ಮೀರಿಲ್ಲವೋ ಅಲ್ಲಿ 6ನೇ ವೇತನ ನೀಡಲು ಈಗಾಗಲೇ ಆದೇಶಿಸಲಾಗಿದೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊಡಬಹುದಾದ ಅವಕಾಶಗಳಿವೆ. ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇಲ್ಲಿಂದ ಅಗತ್ಯ ದಾಖಲೆಗಳನ್ನು ನೀಡಿದಲ್ಲಿ ಮುಂದಿನ ಒಂದು ವಾರದಲ್ಲಿ ಪೂರಕ ಸ್ಪಂದಿಸಲಾಗುವುದು ಎಂದರು.

ಸಚಿವ ಎಸ್.ಅಂಗಾರ, ಆಯುಕ್ತೆ ರೋಹಿಣಿ ಸಿಂಧೂರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಇಒ ಡಾ.ನಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.