ಮಂಗಳೂರು: ‘ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರದ ಜೊತೆ ಚರ್ಚಿಸದೆಯೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದೆ. ಕೇಂದ್ರ ಸರ್ಕಾರವು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸಿದೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ಮಾತ್ರ ಎನ್‌ಐಎಗೆ ವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ನಡೆದ ಇನ್ನಿಬ್ಬರು ಅಮಾಯಕರ ಹತ್ಯೆ ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಅವರಿಗೆ ಏಕೆ ಅನಿಸಿಲ್ಲ. ಅನುಸರಿಸುವ ಅವರ ಮನಸ್ಥಿತಿ ಎಂತಹದ್ದು ಎಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರವೂ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಜಿಲ್ಲೆಯಲ್ಲಿ ನಡೆದ ಎಲ್ಲ ಹತ್ಯೆಗಳ ತನಿಖೆಯನ್ನೂ ಎನ್‌ಐಎಗೆ ವಹಿಸಬೇಕಿತ್ತು’ ಎಂದರು.
’ಸುಹಾಸ್ ಹತ್ಯೆಯಲ್ಲಿ ಪಿಎಫ್‌ಐ ಕೈವಾಡ ಇದೆ. ಸಮಾಜದಲ್ಲಿ ಭಯ ಹುಟ್ಟಿಸುವ ಸಲುವಾಗಿ ಈ ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ ಆದೇಶದಲ್ಲಿ ತಿಳಿಸಿದೆ. ಈ ಪ್ರಕರಣದ ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದವರು ಎನ್ನುವುದಕ್ಕೆ ಕೇಂದ್ರ ಸರ್ಕಾರದ ಬಳಿ ಪುರಾವೆ ಏನಿದೆ’ ಎಂದು ಅವರು ಪ್ರಶ್ನಿಸಿದರು.
‘ಜಿಲ್ಲೆಗೆ ಸೋಮವಾರ ಭೇಟಿ ನೀಡಿದ ಬಿಜೆಪಿ ಮುಖಂಡರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆ ನೀಡಿದ್ದಾರೆ. ಅಶಾಂತಿ ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ. ಪೊಲೀಸರು ನೀತಿ ನಿಯಮಗಳ ಪ್ರಕಾರ ಕೆಲಸ ಮಾಡುತ್ತಾರೆ. ಅವರಿಗೆ ಧರ್ಮಗಳೆಲ್ಲವೂ ಒಂದೇ’ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಾಗೇಂದ್ರ ಕುಮಾರ್, ಅಮೃತ್ ಕದ್ರಿ, ಸುಹಾನ್ ಆಳ್ವ, ದಿನೇಶ್ ಮೂಳೂರು, ಭಾಸ್ಕರ್ ರಾವ್, ಪ್ರೇಮ್ ಬಲ್ಲಾಳ್ ಬಾಗ್, ಜೇಮ್ಸ್ ಶಿವಬಾಗ್, ಸತೀಶ್ ಪೆಂಗಲ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.