ಮಂಗಳೂರು: ಬಜಪೆ ಸಮೀಪ ಈಚೆಗೆ ನಡೆದಿರುವ ಸುಹಾಸ್ ಶೆಟ್ಟಿ ಕೊಲೆಯು ನಿಷೇಧಿತ ಪಿಎಫ್‌ಐ ಸಂಘಟನೆಯ ‘ಟಾರ್ಗೆಟೆಡ್ ಕಿಲ್ಲಿಂಗ್’ ಮಾದರಿಯಲ್ಲಿ ನಡೆದಿರುವುದು ಗೋಚರಿಸುತ್ತದೆ. ಈ ಪ್ರಕರಣವನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ಸಂಸ್ಥೆ) ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿವೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ ಕೆ.ಟಿ. ಉಲ್ಲಾಸ್, ‘ನಡುದಾರಿಯಲ್ಲಿ ಸುಹಾಸ್ ಕೊಲೆ ನಡೆದಿದೆ, ಕೊಲೆ ಆರೋಪಿಗಳು ಯಾವುದೇ ಭಯವಿಲ್ಲದೆ ಆರಾಮವಾಗಿ ಕಾರು ಹತ್ತಿ ಹೊರಟಿರುವುದು ಆ ವೇಳೆ ಸೆರೆಯಾಗಿರುವ ವಿಡಿಯೊದಲ್ಲಿ ದಾಖಲಾಗಿದೆ. ಅವರು ಅಷ್ಟು ವಿಶ್ವಾಸದಲ್ಲಿ ಇರಬೇಕಾದರೆ ಅಲ್ಲಿದ್ದವರು ಅವರ ಜನರೇ ಆಗಿರಬೇಕು ಎಂಬ ಶಂಕೆ ಮೂಡಿದೆ ಎಂದರು.
ಸುರತ್ಕಲ್‌ನ ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಮಾತ್ರ ಸುಹಾಸ್ ಹತ್ಯೆ ನಡೆದಿಲ್ಲ, ಫಾಝಿಲ್ ಸಹೋದರ ಮಾತ್ರ ಕೊಲೆಗೆ ಸುಪಾರಿ ನೀಡಿಲ್ಲ. ಇದಕ್ಕಾಗಿ ₹50 ಲಕ್ಷ ಸಂಗ್ರಹಿಸಿರುವ ಮಾಹಿತಿ ಇದೆ. ಕೊಲೆಗೆ ನಿಷೇಧಿತ ಪಿಎಫ್‌ಐ ಸಂಘಟನೆಯಿಂದ ಹಣಕಾಸು ನೆರವು ದೊರೆತಿದೆ. ಕುಡುಪುವಿನಲ್ಲಿ ಅಶ್ರಫ್ ಎಂಬಾತನ ಕೊಲೆ ನಡೆದ ಮೂರು ದಿನಗಳಲ್ಲಿ ಈ ಕೊಲೆ ನಡೆಸಲಾಗಿದೆ ಎಂದರು.
ಸುಹಾಸ್ ಶೆಟ್ಟಿ ಪರಿಚಯ ಇಲ್ಲದ, ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಕಳಸದ ರಂಜಿತ್ ಮತ್ತು ನಾಗರಾಜ್ ಅವರನ್ನು ಈ ಕೊಲೆಯಲ್ಲಿ ಬಳಸಿಕೊಳ್ಳಲಾಗಿದೆ. ಕೊಲೆಯಲ್ಲಿ ಹಿಂದೂಗಳು ಇರಬೇಕು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಇವರಿಬ್ಬರನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ. ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳಾದ ಮುಸ್ತಾಫ ಮತ್ತು ಕಬೀರ್ ಸ್ಥಳದಲ್ಲಿದ್ದ ಬಗ್ಗೆ ಬಲವಾದ ಮಾಹಿತಿ ದೊರೆತಿದೆ. ಸುಖಾನಂದ ಶೆಟ್ಟಿ ಹತ್ಯೆ ಆರೋಪಿ ನೌಷಾದ್ ಸುಹಾಸ್ ಹತ್ಯೆಗೆ ಹಣ ನೀಡಿದ್ದಾನೆ ಎಂದು ಕೆ.ಟಿ. ಉಲ್ಲಾಸ್ ಆರೋಪಿಸಿದರು.
ಪ್ರಕರಣದ ತನಿಖೆ ನಡೆಸಲು ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ರಾಜ್ಯದ ಪೊಲೀಸರ ಬಗ್ಗೆ ಅನುಮಾನವಿಲ್ಲ. ಆದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುವ ಬಗ್ಗೆ ಸಂಶಯವಿದೆ. ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಬಜಪೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಒಬ್ಬರು ತೊಂದರೆ ಕೊಡುತ್ತಿದ್ದ ಬಗ್ಗೆ ಸುಹಾಸ್ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಸುಹಾಸ್ ತಾಯಿ ಕೂಡ ಈ ವಿಷಯ ಹೇಳಿದ್ದಾರೆ. ಈ ಹೆಡ್ ಕಾನ್‌ಸ್ಟೇಬಲ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಸುಹಾಸ್ ಯಾವುದೇ ಆಯುಧ ಇಟ್ಟುಕೊಂಡು ಓಡಾಡದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಕೊಲೆಯಾಗುವ ಮೂರು ದಿನ ಮೊದಲಿನಿಂದ ಸುಹಾಸ್ ಬಳಿ ಯಾವುದೇ ಆಯುಧ ಇರಲಿಲ್ಲ ಎಂಬ ಸಂಗತಿ ಕೊಲೆ ಆರೋಪಿಗಳಿಗೆ ತಲುಪಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಬಜಪೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಅನ್ನು ತನಿಖೆಗೆ ಒಳಪಡಿಸಬೇಕು ಎಂದರು.
ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ರವಿ ಅಸೈಗೋಳಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಲಿಖಿತ್ ಮೂಡುಶೆಡ್ಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.