ಮಂಗಳೂರು: ಹಿಂದುತ್ವವಾದಿ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರನ್ನು ಬುಧವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಒಟ್ಟು 11 ಆಗಿದೆ.
ಮಂಗಳೂರಿನ ಕಳವಾರು ಗ್ರಾಮದ ಕಳವಾರು ಆಶ್ರಯ ಕಾಲೊನಿ ನಿವಾಸಿ ಅಬೂಬಕ್ಕರ್ ಪುತ್ರ ಅಜರುದ್ದೀನ್ ಯಾನೆ ಅಜ್ಜು (29), ಬಜಪೆಯ ಉಸ್ಮಾನಿಯಾ ಮಸೀದಿ ಬಳಿ ಭಟ್ರಕೆರೆ ಜೈನಾಬಿ ಪ್ಲಾಟ್‌ನಲ್ಲಿ ವಾಸವಾಗಿರುವ, ಉಡುಪಿ ಜಿಲ್ಲೆ ಬೆಳಪು ಬದ್ರಿಯಾ ನಗರದ ಕೆ.ಎಂ.ನಜೀರ್ ಪುತ್ರ ಅಬ್ದುಲ್ ಖಾದರ್ ಯಾನೆ ನೌಫಲ್ (24) ಹಾಗೂ ಹಾಸನ ಜಿಲ್ಲೆ ಕೆ.ಆರ್ ಪುರಂ ಬಾಡಿಗೆ ಮನೆಯಲ್ಲಿದ್ದ, ಬಂಟ್ವಾಳ ತಾಲ್ಲೂಕು ಫರಂಗಿಪೇಟೆಯ ಕುಂಪನಮಜಲು ನಿವಾಸಿ ನಸ್ರುದ್ದೀನ್ ಪುತ್ರ ನೌಷಾದ್ ಯಾನೆ ಚೊಟ್ಟೆ ನೌಷಾದ್ (39) ಬಂಧಿತರು.
ಬಜಪೆ ಬಳಿಯ ಕಿನ್ನಿಪದವಿನಲ್ಲಿ ಮೇ 1ರಂದು ರಾತ್ರಿ ಸುಹಾಸ್ ಶೆಟ್ಟಿ ಕೊಲೆ ನಡೆದಿತ್ತು. ಎಂಟು ಆರೋಪಿಗಳನ್ನು ಮೇ 3ರಂದು ಬಂಧಿಸಲಾಗಿತ್ತು. ಸೋಮವಾರ ಬಂಧಿತರ ಪೈಕಿ ಅಜರುದ್ದೀನ್ ಮೇಲೆ ಪಣಂಬೂರು, ಸುರತ್ಕಲ್ ಮತ್ತು ಮುಲ್ಕಿ ಠಾಣೆಗಳಲ್ಲಿ 3 ಕಳವು ಪ್ರಕರಣಗಳು ದಾಖಲಾಗಿವೆ. ಈತ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದ. ಅಬ್ದುಲ್ ಖಾದರ್ ಆರೋಪಿಗಳಿಗೆ ಕಾರಿನಲ್ಲಿ ಪರಾರಿಯಾಗಲು ಸಹಕರಿಸಿದ್ದ. ನೌಷಾದ್ ಕೊಲೆಗೆ ಸಂಚು ರೂಪಿಸಲು ನೆರವಾಗಿದ್ದ.
ನೌಷಾದ್ ವಿರುದ್ಧ ಸುರತ್ಕಲ್, ಬಜ್ಪೆ, ಮೂಡುಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆಗೆ ಸಂಚು ಸೇರಿ 6 ಪ್ರಕರಣಗಳು ದಾಖಲಾಗಿವೆ. ಅಜರುದ್ದೀನ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಅಬ್ದುಲ್ ಖಾದರ್ ಮತ್ತು ನೌಷಾದ್‌ನನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.