ADVERTISEMENT

ಸುರತ್ಕಲ್‌ ಟೋಲ್‌ಗೇಟ್ ಪ್ರತಿಭಟನೆ: ಹೋರಾಟ ಸಮಿತಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 13:35 IST
Last Updated 20 ಅಕ್ಟೋಬರ್ 2022, 13:35 IST
   

ಮಂಗಳೂರು: ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ವಿರುದ್ಧ ಟೋಲ್‌ಗೇಟ್‌ ವ್ಯವಸ್ಥಾಪಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಪ್ರತ್ಯೇಕ ದೂರು ನೀಡಿದ್ದು, ಸುರತ್ಕಲ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿವೆ.
‘ಅ.18ರಂದು ಹೋರಾಟ ಸಮಿತಿಯ 30ಕ್ಕಿಂತ ಹೆಚ್ಚು ಸದಸ್ಯರು ಅಕ್ರಮ ಕೂಟ ಸೇರಿ ಸುರತ್ಕಲ್‌ ಟೋಲ್‌ ಪ್ಲಾಜಾ ಎದುರು ರಸ್ತೆಯಲ್ಲಿ ಕುಳಿತು ಘೋಷಣೆ ಕೂಗುತ್ತ, ವಾಹನ ಸಂಚಾರ ತಡೆದು ನಿಲ್ಲಿಸಿದರು. ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದರು‘ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯವರು ಎಸಿಪಿ ಕಚೇರಿಯಲ್ಲಿ ಅ.14ರಂದು ನಡೆದ ಸಭೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರೂ, ಅ.18ರಂದು ನಡೆಸಿದ ಪ್ರತಿಭಟನೆಯ ವೇಳೆ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ’ ಎಂದು ದೂರಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಹಾಗೂ ಸುರತ್ಕಲ್ ಎನ್‌ಐಟಿಕೆ ಟೋಲ್‌ನ ಶುಲ್ಕ ವಸೂಲಿ ಏಜೆನ್ಸಿ ನೂರ್‌ ಮೊಹಮ್ಮದ್‌ ಸಂಸ್ಥೆಯ ಸುರತ್ಕಲ್‌ ವಿಭಾಗದ ವ್ಯವಸ್ಥಾಪಕ ಶಿಶುಪಾಲ್ ಸಿಂಗ್‌ ಅವರು ಅ.18ರಂದೇ ದೂರು ನೀಡಿದ್ದು, ಪೊಲೀಸರು ಅದೇ ದಿನ ಎಫ್‌ಐಆರ್‌ ದಾಖಲಿಸಿದ್ದಾರೆ.

ADVERTISEMENT

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 283, 149 (ಅಕ್ರಮ ಕೂಟ ಸೇರಿ, ಸಾರ್ವಜನಿಕರ ಸುರಕ್ಷತೆಗೆ ಅಡ್ಡಿಪಡಿಸಿದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

ಸುರತ್ಕಲ್‌ ಟೋಲ್‌ ಗೇಟ್‌ ತೆರವುಗೊಳಿಸಬೇಕು ಎಂದು ಹೋರಾಟಗಾರರು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.