ADVERTISEMENT

ಸರ್ಫರ್‌ಗಳನ್ನು ಸೆಳೆಯುವ ಕಡಲ ತೀರ

ಪಣಂಬೂರು, ಸಸಿಹಿತ್ಲು ಬೀಚ್‌ಗಳು ಸರ್ಫಿಂಗ್‌ ಹೆಬ್ಬಾಗಿಲು

ಮಹೇಶ ಕನ್ನೇಶ್ವರ
Published 29 ಮೇ 2022, 4:30 IST
Last Updated 29 ಮೇ 2022, 4:30 IST
ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಸರ್ಫರ್‌ಗಳು
ಮಂಗಳೂರಿನ ಪಣಂಬೂರು ಕಡಲತೀರದಲ್ಲಿ ಸರ್ಫರ್‌ಗಳು   

ಮಂಗಳೂರು: ಕರಾವಳಿಯ ಕಡಲತೀರಗಳು ಸರ್ಫರ್‌ಗಳ ಅಚ್ಚುಮೆಚ್ಚಿನ ತಾಣಗಳಾಗಿವೆ. ಇಲ್ಲಿನ ಬೀಚ್‌ಗಳಲ್ಲಿ ಹೊರಹೊಮ್ಮುವ ನಾಜೂಕಿನ ಅಲೆಗಳು, ಸರ್ಫಿಂಗ್‌ಗೆ ಹೇಳಿ ಮಾಡಿಸಿದಂತಹ ಆಕರ್ಷಣೆ ಹೊಂದಿವೆ. ಸರ್ಫಿಂಗ್‌ಗೆ ಸಮುದ್ರದ ಅಲೆಗಳು ಅತ್ಯುತ್ತಮವಾಗಿ ಇರುವುದರಿಂದ ಈ ಭಾಗದಲ್ಲಿ ಸರ್ಫ್ ಕ್ಲಬ್‌ ಹಾಗೂ ಸರ್ಫರ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ ಆಗಿದೆ.

ತಣ್ಣೀರಬಾವಿ, ಪಣಂಬೂರು, ಇಡ್ಯಾ, ಸಸಿಹಿತ್ಲು ಮತ್ತು ಹೆಜಮಾಡಿ ಕೋಡಿ ಬೀಚ್‌ಗಳು ಸರ್ಫಿಂಗ್‌ಗೆ ಹೇಳಿ ಮಾಡಿಸದಂತಹ ಜಾಗ. ಮಂಗಳೂರಿನ ಕಡಲ ಕಿನಾರೆಯಲ್ಲಿ ವಿಶೇಷವಾಗಿ ಅಲೆಗಳು ಸರ್ಫರ್‌ಗಳ ಜತೆಗೆ ಹೆಗಲು ಕೊಡುವುದರಿಂದ ದೇಶ, ವಿದೇಶದ ಸರ್ಫರ್‌ಗಳು ಇಲ್ಲಿನ ಬೀಚ್‌ಗಳತ್ತ ಬರುತ್ತಾರೆ. ಇಲ್ಲಿನ ಕಡಲ ಕಿನಾರೆಯಲ್ಲಿ ನಡೆಯುವ ಸರ್ಫಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಉತ್ಸುಕರಾಗಿರುತ್ತಾರೆ.

ಅಪಾಯಕಾರಿಯಲ್ಲದ, ಕಠಿಣವಲ್ಲದ ಅಲೆಗಳಿಂದಾಗಿ ಮಂಗಳೂರಿನ ಬೀಚ್‌ಗಳು ಸರ್ಫಿಂಗ್‌ ಹಾಗೂ ಸರ್ಫರ್‌ಗಳ ನೆಚ್ಚಿನ ತಾಣವಾಗಿ ಪರಿವರ್ತನೆ ಆಗುತ್ತಿವೆ. ಸೋಮೇಶ್ವರ, ತಣ್ಣೀರುಬಾವಿ, ಸಸಿಹಿತ್ಲು ಹಾಗೂ ಪಣಂಬೂರು ಬೀಚ್‌ಗಳಿವೆ. ಆದರೆ, ತಣ್ಣೀರುಬಾವಿ ಬೀಚ್‌ನಲ್ಲಿ ಜಲ ಸಾಹಸ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸರ್ಫಿಂಗ್‌ ಸ್ಪರ್ಧೆಗಳು ಹೆಚ್ಚು ನಡೆಯುವುದು ಸಸಿಹಿತ್ಲು ಹಾಗೂ ಪಣಂಬೂರು ಬೀಚ್‌ಗಳಲ್ಲಿ ಮಾತ್ರ. ಪ್ಯಾರಾಸೇಲಿಂಗ್‌, ವಾಟರ್‌ ಜೆಟ್‌, ಫ್ಲೋಟಿಂಗ್‌ ಜೆಟ್‌, ಕೆನೊಯಿಂಗ್‌, ವಿಂಡ್‌ ಸರ್ಫಿಂಗ್‌, ಜೆಟ್‌ಸ್ಕೀ, ಸ್ಪೀಡ್‌ ಬೋಟ್‌ ಹಾಗೂ ಬನಾನ ರೈಡ್‌, ಸ್ಕೈ ಡೈವಿಂಗ್‌ ಮುಂತಾದ ಜಲಸಾಹಸ ಕ್ರೀಡೆಗಳು ಕಾಲಕ್ಕೆ ತಕ್ಕಂತೆ ಆಯೋಜನೆ ಆಗುತ್ತಿವೆ.

ADVERTISEMENT

ಸರ್ಫಿಂಗ್ ಅವಧಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಹವಾಮಾನಕ್ಕೆ ಅನುಗುಣವಾಗಿ ಏಪ್ರಿಲ್‌ನಿಂದ ಮೇ ವರೆಗೆ ಇರುತ್ತದೆ. ಕೋವಿಡ್‌ನಿಂದ ಸರ್ಫಿಂಗ್‌ ಹಾಗೂ ಸರ್ಫರ್‌ಗಳಿಗೆ ಅಲೆಗಳ ಏಟು ಬಲವಾಗಿಯೇ ಬಿದ್ದಿತ್ತು. ಹಲಗೆ ಹಿಡಿದು ಸಮುದ್ರಕ್ಕೆ ಇಳಿಯುವ ಸರ್ಫ್‌ರ್‌ಗಳಲ್ಲಿ ಮಂಕು ಕವಿದಿತ್ತು. ಆದರೆ, ಈಗ ಬೀಚ್‌ ಪ್ರವಾಸೋದ್ಯಮ ಉತ್ತೇಜನದ ಭಾಗವಾಗಿ ಜಲಸಾಹಸ ಕ್ರೀಡೆಗಳಿಗೆ ಒತ್ತು ಸಿಗುತ್ತಿದೆ.

2017 ರಲ್ಲಿ ಸಸಿಹಿತ್ಲುವಿನಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಸರ್ಫಿಂಗ್‌ ಹಬ್ಬ ಅಂತರರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದರ ಭಾಗವಾಗಿ ಈಗ ಮತ್ತೆ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ನಡೆಯುತ್ತಿದೆ. ಅಲೆಗಳ ನಡುವೆ ಸರ್ಫರ್‌ಗಳು ಸ್ಪರ್ಧೆಗೆ ಇಳಿದಿದ್ದಾರೆ. ಈ ಭಾಗದಲ್ಲಿ ಮಾನ್ಯತೆ ಪಡೆದ ಮಂತ್ರ ಸರ್ಫಿಂಗ್‌ ಕ್ಲಬ್‌, ಮಂಗಳೂರು ಸರ್ಫಿಂಗ್‌ ಕ್ಲಬ್‌, ಇಂಡಿಕಾ ಸರ್ಫ್ ಕ್ಲಬ್‌ಗಳು ಮತ್ತೆ ಗರಿಬಿಚ್ಚಿಕೊಂಡಿವೆ.

‘ಸರ್ಫಿಂಗ್‌ಗೆ ಮಂಗಳೂರಿನಲ್ಲಿ ಉತ್ತಮ ಅವಕಾಶಗಳಿವೆ. ಸರ್ಫಿಂಗ್‌ಗೆ ಅಗತ್ಯವಾದ ಅಲೆಗಳು ಉತ್ತಮ ರೀತಿಯಲ್ಲಿ ಸರ್ಫರ್‌ಗಳಿಗೆ ಸ್ಪಂದಿಸುತ್ತಿದ್ದು, ಈ ಭಾಗದಲ್ಲಿಯೇ ಹೆಚ್ಚು ಸರ್ಫಿಂಗ್‌ ಸ್ಪರ್ಧೆಗಳು ನಡೆಯುತ್ತವೆ. ಪ್ರವಾಸೋದ್ಯಮ ಬೆಳೆಯಲು ಸರ್ಫಿಂಗ್‌ಗೆ ಮತ್ತಷ್ಟು ಪ್ರೋತ್ಸಾಹ ಅಗತ್ಯ’ ಎಂದು ಗೌರವ್‌ ಹೆಗ್ಡೆ ಹೇಳಿದರು.

‘ಸಸಿಹಿತ್ಲಿನಲ್ಲಿ ಸರ್ಫ್‌ ಲೈಫ್‌ ಶಾಲೆ’
‘ಸರ್ಫಿಂಗ್ ಅನ್ನು ಉತ್ತೇಜಿಸಲು ಸಸಿಹಿತ್ಲುವಿನಲ್ಲಿ ಸರ್ಫ್ ಲೈಫ್ ಶಾಲೆ ಸ್ಥಾಪಿಸುವ ಮತ್ತು ಜೀವರಕ್ಷಕರಿಗೆ ಜೀವರಕ್ಷಕ ಕೌಶಲಗಳ ತರಬೇತಿ ನೀಡುವ ಪ್ರಸ್ತಾವ ಇದೆ. ಕೇಂದ್ರದಿಂದ 2019 ರ ಅಧಿಸೂಚನೆಯ ಮಾರ್ಗಸೂಚಿಗಳ ಪ್ರಕಾರ ಸಿದ್ಧಪಡಿಸಲಾದ ಸಿಆರ್‌ಜೆಡ್‌ ನಿಯಮಗಳಿಗೆ ಅನುಮೋದನೆ ಪಡೆದ ನಂತರ ಸರ್ಫ್ ಲೈಫ್ ಶಾಲೆ ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ‌‌‌ಡಾ.ರಾಜೇಂದ್ರ ಕೆ.ವಿ ಹೇಳಿದರು.‌

‘ಮಂಗಳೂರಿನಲ್ಲಿ ಸರ್ಫಿಂಗ್‌ಗೆ ಅವಕಾಶ’
‘ಸರ್ಫಿಂಗ್‌ ಬಗ್ಗೆ ಜ್ಞಾನ ಮತ್ತು ಅರಿವು ಹೆಚ್ಚಳ ಆಗಿರುವುದರಿಂದ ಜನರು ಸರ್ಫಿಂಗ್‌ನತ್ತ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಸರ್ಫಿಂಗ್ ಸಂಸ್ಕೃತಿ ಬೆಳೆಸುವ ಜತೆಗೆ ಪ್ರವಾಸೋದ್ಯಮ ಹಾಗೂ ಜಲ ಸಾಹಸ ಕ್ರೀಡೆಗಳ ಬೆಳವಣಿಗೆಗೆ ಹೆಚ್ಚು ಒತ್ತು ಸಿಗುತ್ತಿದೆ. ಸರ್ಫಿಂಗ್‌ ನಡೆಸಲು ಬೀಚ್‌ಗಳು ಸುವ್ಯವಸ್ಥಿತವಾಗಿ ಇರಬೇಕು. ಸರ್ಫಿಂಗ್‌ ಬೆಳವಣಿಗೆಗೆ ಬೇಕಾದ ಎಲ್ಲ ಅವಕಾಶಗಳು ಮಂಗಳೂರಿನ ಬೀಚ್‌ಗಳಲ್ಲಿ ಸಿಗುತ್ತವೆ’ ಎಂದು ಮಂಗಳೂರು ಸರ್ಫ್ ಕ್ಲಬ್‌ನ ಮಿಥುನ್ ಭಟ್ ಕಾಕುಂಜೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.