ADVERTISEMENT

ಪರಿಸರಕ್ಕೆ ಹಾನಿ ಆಗದಂತೆ ಮೀನುಗಾರಿಕೆ ನಡೆಸಿ: ವಿಶ್ವ ಮೀನುಗಾರಿಕೆ ದಿನಾಚರಣೆ

ವಿಶ್ವ ಮೀನುಗಾರಿಕೆ ದಿನಾಚರಣೆ: ಡಾ. ಇಡ್ಯಾ ಕರುಣಸಾಗರ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 7:23 IST
Last Updated 22 ನವೆಂಬರ್ 2021, 7:23 IST
ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಭಾನುವಾರ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯಲ್ಲಿ ಡಾ.ಇಡ್ಯಾ ಕರುಣಸಾಗರ್‌ ಮಾತನಾಡಿದರು.
ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಭಾನುವಾರ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯಲ್ಲಿ ಡಾ.ಇಡ್ಯಾ ಕರುಣಸಾಗರ್‌ ಮಾತನಾಡಿದರು.   

ಮಂಗಳೂರು: ಪರಿಸರಕ್ಕೆ ಹಾನಿಯಾಗದ ರೀತಿಯ ಸುಸ್ಥಿರ ಮೀನುಗಾರಿಕೆ ನಡೆಸುವುದು ಇಂದಿನ ಅಗತ್ಯವಾಗಿದ್ದು, ಮೀನಿನ ಗುಣಮಟ್ಟವನ್ನೂ ಕಾಯ್ದುಕೊಳ್ಳಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಲಹೆಗಾರ ಡಾ.ಇಡ್ಯಾ ಕರುಣಸಾಗರ್‌ ಹೇಳಿದರು.

ಪಶುಸಂಗೋಪನೆ, ಮೀನುಗಾರ ವಿಶ್ವವಿದ್ಯಾಲಯ, ಮೀನುಗಾರಿಕೆ ಕಾಲೇಜು, ಕೇಂದ್ರ ಸರ್ಕಾರ ಪರಿಸರ, ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆಗಳ ಆಶ್ರಯದಲ್ಲಿ ಭಾನುವಾರ ನಗರದ ಮೀನುಗಾರಿಕೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ವರ್ಷಗಳಲ್ಲಿ ಸಮುದ್ರದಲ್ಲಿ ಮೀನಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕರಾವಳಿಯಲ್ಲಿ ಮೀನು ಪ್ರಮುಖ ಖಾದ್ಯವಾಗಿದ್ದು, ಶೇ 15 ರಷ್ಟು ಪ್ರೋಟೀನ್‌ ಒದಗಿಸುತ್ತಿದೆ. ಪರಿಸರಕ್ಕೆ ತೊಂದರೆ ಆಗದ ರೀತಿಯಲ್ಲಿ ಮೀನುಗಾರಿಕೆ ನಡೆಸುವ ಮೂಲಕ ಮತ್ಸ್ಯಸಂಪತ್ತಿನ ವೃದ್ಧಿ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕರಾವಳಿ ಕಾವಲು ಪಡೆಯ ಡಿಐಜಿ ಎಸ್. ಬಾಬು ವೆಂಕಟೇಶ್ ಮಾತನಾಡಿ, ಪ್ರತಿ ವರ್ಷ ಕರಾವಳಿ ಕಾವಲು ಪಡೆ ಸರಾಸರಿ 200 ಮೀನುಗಾರರ ಪ್ರಾಣ ರಕ್ಷಣೆ ಮಾಡುತ್ತಿದೆ. ಇದರ ಜೊತೆಗೆ ಅಕ್ರಮ ಮೀನುಗಾರಿಕೆಯನ್ನು ನಿಯಂತ್ರಿಸುವಲ್ಲಿ ಕಾರ್ಯ ನಿರತವಾಗಿದೆ ಎಂದು ತಿಳಿಸಿದರು.

ಚೆನ್ನೈನ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಪ್ರೊ. ಆರ್. ರಮೇಶ್ ಮಾತನಾಡಿ, ತಾಪಮಾನದ ಹೆಚ್ಚಳದಿಂದ ಮತ್ಸ್ಯಸಂಪತ್ತು ಕಡಿಮೆಯಾಗುತ್ತಿದೆ. ಜಾಗತಿಕವಾಗಿ ಕಡಲ ಉತ್ಪನ್ನಗಳ ಪ್ರಮಾಣ ಇಳಿಕೆಯಾಗಿದ್ದು, ಜೀವವೈವಿಧ್ಯವನ್ನು ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಮೀನುಗಾರಿಕೆ ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ ವೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೀನುಗಾರಿಕೆ ಕಾಲೇಜಿನ ಕಾರ್ಯವಿಧಾನಗಳ ಕುರಿತು ಮಾಹಿತಿ ನೀಡಿದರು. ಮೀನುಗಾರಿಕೆ ಕುರಿತು ತಯಾರಿಸಿರುವ ವಿಡಿಯೊ ಹಾಗೂ ಕರ್ನಾಟಕದಲ್ಲಿ ನೀಲಿ ಆರ್ಥಿಕತೆಯ ಕುರಿತಾದ ವರದಿಯನ್ನು ಬಿಡುಗಡೆ ಮಾಡಲಾಯಿತು. ಕೆನರಾ ಕಾಲೇಜು, ಸಹ್ಯಾದ್ರಿ ಕಾಲೇಜು, ರಾಮಕೃಷ್ಣ ಕಾಲೇಜು, ಬೆಸೆಂಟ್ ಕಾಲೇಜು, ಮಿಲಾಗ್ರಿಸ್ ಕಾಲೇಜು ಹಾಗೂ ಮೀನುಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ಅಂತರ ಕಾಲೇಜು ಮೀನುಗಾರಿಕೆ ಉತ್ಸವದಲ್ಲಿ ಭಾಗವಹಿಸಿದ್ದರು.

ಮೀನು ಸಂಸ್ಕರಣೆ, ಮೀನಿನ ಖಾದ್ಯ, ಕೌಶಲ ಅಭಿವೃದ್ಧಿ, ಮತ್ಸ್ಯೋತ್ಪನ್ನಗಳ ಮಳಿಗೆಗಳನ್ನು ಹಾಕಲಾಗಿತ್ತು. ಸ್ತ್ರೀಶಕ್ತಿ ಸಂಘ ಹಾಗೂ ಸ್ಥಳೀಯ ಮೀನುಗಾರ ಸಮುದಾಯದವರು ತಮ್ಮ ಉತ್ಪನ್ನಗಳ ಮಾಹಿತಿ ನೀಡಿದರು.

6 ಲಕ್ಷ ಟನ್ ಮೀನು ಉತ್ಪಾದನೆ ಗುರಿ

ಈ ವರ್ಷ 2.51 ಲಕ್ಷ ಟನ್ ಒಳನಾಡು ಮೀನುಗಾರಿಕೆ ನಡೆದಿದ್ದು, ಕರಾವಳಿಯಲ್ಲಿ 3.47 ಲಕ್ಷ ಟನ್‌ ಮೀನು ಉತ್ಪಾದನೆ ಆಗಿದೆ. ಕರಾವಳಿಯಲ್ಲಿ 6 ಲಕ್ಷ ಟನ್‌ ಮೀನುಗಾರಿಕೆಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ದಿನೇಶ್‌ ತಿಳಿಸಿದರು.

ಮೀನುಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಯು ಯೋಜನೆ ರೂಪಿಸಿದೆ. 1952 ರಲ್ಲಿ ಮೀನುಗಾರಿಕೆ ಇಲಾಖೆಗೆ ಕೇವಲ ₹10–20 ಕೋಟಿ ಅನುದಾನ ನೀಡಲಾಗುತ್ತಿತ್ತು. ಇದೀಗ ವಾರ್ಷಿಕ ₹350 ಕೋಟಿ ಅನುದಾನ ಒದಗಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.