ADVERTISEMENT

‘ಸ್ವರ ಕುಡ್ಲ ಸೀಸನ್ -4’ ಸ್ಪರ್ಧೆ 14ರಿಂದ

​ಪ್ರಜಾವಾಣಿ ವಾರ್ತೆ
Published 10 ಮೇ 2022, 15:33 IST
Last Updated 10 ಮೇ 2022, 15:33 IST

ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವತಿಯಿಂದ ಮೇ 14 ಮತ್ತು 15ರಂದು ‘ಸ್ವರ ಕುಡ್ಲ ಸೀಸನ್ -4’ ಸ್ಪರ್ಧೆ ಹಾಗೂ ಮೇ 21ರಂದು ವಾರ್ಷಿಕೋತ್ಸವವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಗೀತ ಕಲಾಕ್ಷೇತ್ರದ ಅಶಕ್ತರಿಗೆ ಆರ್ಥಿಕ ಸಹಾಯ, ಸಾಧಕರಿಗೆ ಸನ್ಮಾನ, ಪ್ರತಿಭಾನ್ವೇಷಣೆ, ವಿದ್ಯಾನಿಧಿ ಇತ್ಯಾದಿ ಉತ್ತಮ ಧ್ಯೇಯಗಳೊಂದಿಗೆ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. 14ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 14 ಮತ್ತು 15ರಂದು ಬೆಳಿಗ್ಗೆ 9.30ಕ್ಕೆ ನಗರದ ಬಿಇಎಂ ಪ್ರೌಢಶಾಲಾ ಸಭಾಂಗಣದಲ್ಲಿ ಸ್ವರ ಕುಡ್ಲ ಸೀಸನ್-4ರ ಸಂಗೀತ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದರು.

ವಿದ್ಯಾರ್ಥಿಗಳು, ಸಾರ್ವಜನಿಕರು ಇದರಲ್ಲಿ ಭಾಗವಹಿಸಬಹುದು. ಇಲ್ಲಿ ಸಂಗೀತ ಸ್ಪರ್ಧೆಯ ಧ್ವನಿ ಪರೀಕ್ಷೆ ಮತ್ತು ಸೆಮಿಫೈನಲ್ ನಡೆಯಲಿದೆ. ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಎಂ.ಎ.ನಟರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮೇ 21ರಂದು ನಗರದ ಪುರಭವನದಲ್ಲಿ ಸ್ವರ ಕುಡ್ಲ ಗ್ರ್ಯಾಂಡ್ ಫಿನಾಲೆ ಹಾಗೂ ವಾರ್ಷಿಕೋತ್ಸವ ಸಮಾರಂಭ, ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ADVERTISEMENT

ಸಾಧಕ ಕಲಾವಿದರಾದ ಕ್ಲಾರಿಯೊನೆಟ್ ವಾದಕ ಯಶವಂತ್ ದೇವಾಡಿಗ, ಗಾಯಕ ಮತ್ತು ಸಾಹಿತಿ ಹುಸೈನ್ ಕಾಟಿಪಳ್ಳ, ಗಾಯಕ ಪ್ರೇಮ್ ಕುಮಾರ್ ಲೋಬೊ ಅವರನ್ನು ಸನ್ಮಾನಿಸಲಾಗುವುದು. ನಂತರ ಸವಿತಕ್ಕ ಬೆಂಗಳೂರು ತಂಡದಿಂದ ಸಂಗೀತ ಸವಿಗಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಒಕ್ಕೂಟದ ಅಧ್ಯಕ್ಷ ರಮೇಶ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್ ಉಳ್ಳಾಲ್, ಖಜಾಂಚಿ ಸಂತೋಷ್ ಅಂಚನ್, ಗೌರವ ಸಲಹೆಗಾರ ಮುರಳೀಧರ ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.