
ಮಂಗಳೂರು: ತಲವಾರು ಹಿಡಿದು ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರೀಲ್ಸ್ ತಯಾರಿಸಲು ಬಳಸಿದ ತಲವಾರು ಹಾಗೂ ಅದರ ಕಿರು ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಬಳಸಿದ್ದ ಮೊಬೈಲ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಬಂದರು ನಿವಾಸಿ ಅಮೀರ್ ಸೊಹೇಲ್ (28) ಹಾಗೂ ಕಾವೂರು ಉರುಂದಾಡಿಗುಡ್ಡೆಯ ಸುರೇಶ (29) ಬಂಧಿತ ಆರೋಪಿಗಳು. ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿರುವ ಹಿನ್ನೆಲೆ ಇರುವ ಆರೋಪಿ ಅಮೀರ್ ಸೊಹೈಲ್ ತಲವಾರನ್ನು ಹಿಡಿದು ನೃತ್ಯ ಮಾಡಿದ ಕಿರು ವಿಡಿಯೊವನ್ನು ಸುರೇಶ್ ಪಿಎಸ್‌ವೈ ಎಂಬ ಫೇಸ್‌ಬುಕ್ ಖಾತೆಯಲ್ಲಿ ಇದೇ 13ರಂದು (ಶನಿವಾರ) ‘ನಾಯಕ್ ನಹಿಂ... ಖಳ್ ನಾಯಕ್ ಮೆ ಹೂಂ’ ಎಂಬ ಹಿನ್ನೆಲೆ ಹಾಡಿನೊಂದಿಗೆ ಹಂಚಿಕೊಳ್ಳಲಾಗಿತ್ತು. ಬಿಳಿ ಬಣ್ಣದ ಹೃದಯದ ಚಿಹ್ನೆ ಹಾಗೂ ವೈಬ್ಸ್ ಎಂಬ ಬರಹವೂ ಆ ವಿಡಿಯೊದಲ್ಲಿತ್ತು. ವಿಡಿಯೊ ಸಾರ್ವಜನಿಕರಿಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿತ್ತು. ಆರೋಪಿಗಳಾದ ಅಮೀರ್ ಸೊಹೈಲ್ ಹಾಗೂ ಸುರೇಶ್ ಎಂಬುವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಮಾರ್ಗದರ್ಶನದಂತೆ ಕಾವೂರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು, ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿ ಸಂಭಾಜಿ ಕದಂ, ಕೆಂಚನ ಗೌಡ, ಶರಣವ್ ರಾಘವೇಂದ್ರ, ರಿಯಾಜ್ ಅವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.