ಮಂಗಳೂರು: ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವದ ಭಾಗವಾಗಿ ಜ.11 ಮತ್ತು 12ರಂದು ನಗರದ ತಣ್ಣೀರುಬಾವಿ ಕಡಲತೀರದಲ್ಲಿ ‘ಬೀಚ್ ಉತ್ಸವ’ ಆಯೋಜಿಸಲಾಗಿದೆ ಎಂದು ಬೀಚ್ ಉತ್ಸವ ಸಮಿತಿಯ ಅಧ್ಯಕ್ಷರಾಗಿರುವ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರೋಹನ್ ಕಾರ್ಪೊರೇಷನ್ ಸಹಯೋಗದಲ್ಲಿ ನಡೆಯುವ ಉತ್ಸವದಲ್ಲಿ ಜ.11ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ, 7.30ರಿಂದ ಮಣಿಕಾಂತ್ ಕದ್ರಿ ಲೈವ್, 12ರಂದು ಬೆಳಿಗ್ಗೆ 5.30ಕ್ಕೆ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಕಾರ್ಯಕ್ರಮ, 6.30ಕ್ಕೆ ಉದಯ ರಾಗ, 9 ಗಂಟೆಗೆ ಜಲಕ್ರೀಡೆ, 9.30ಕ್ಕೆ ಮರಳು ಶಿಲ್ಪ ಸ್ಪರ್ಧೆ, ಸಂಜೆ 5.30ರಿಂದ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭದ ನಂತರ ಗಾಯಕ ರಘು ದೀಕ್ಷಿತ್ ತಂಡದ ಲೈವ್ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಡಲ ತಡಿಯ ಸ್ವಚ್ಛತೆಯ ಹೊಣೆಯನ್ನು ಮಹಾನಗರ ಪಾಲಿಕೆಗೆ ವಹಿಸಲಾಗಿದೆ. ಜಿಲ್ಲೆ, ಹೊರ ಜಿಲ್ಲೆಗಳ ಪ್ರೇಕ್ಷಕರು ಸೇರುವುದರಿಂದ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದೆ. ಕೋಸ್ಟ್ ಗಾರ್ಡ್, ಜೀವ ರಕ್ಷಕ ಸಿಬ್ಬಂದಿ, ಸ್ಥಳೀಯ ಮೀನುಗಾರರ ಸಹಕಾರ ಪಡೆಯುವ ಜೊತೆಗೆ, ಅಲ್ಲಲ್ಲಿ ಬ್ಯಾರಿಕೇಡ್ ವ್ಯವಸ್ಥೆಗೊಳಿಸಲಾಗುವುದು. 6.30ಕ್ಕೆ ಜಲಕ್ರೀಡೆಗಳು ಬಂದಾಗುತ್ತವೆ. ನಂತರ ಯಾರೂ ಕಡಲಿಗೆ ಇಳಿಯಬಾರದು ಎಂದು ಹೇಳಿದರು.
ಕರಾವಳಿ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಭಾನುವಾರ ಉತ್ಸವದ ಮೈದಾನಕ್ಕೆ 12 ಸಾವಿರಕ್ಕೂ ಅಧಿಕ ಮಂದಿ, ಕದ್ರಿ ಉದ್ಯಾನದಲ್ಲಿ ನಡೆದ ಶ್ವಾನ ಪ್ರದರ್ಶನಕ್ಕೆ 3,500ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಜಹರಾ ಖಾನಂ, ಯತೀಶ್ ಬೈಕಂಪಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.