ADVERTISEMENT

ಫ್ರಾನ್ಸ್‌ನ ಗಾಳಿಪಟ ಉತ್ಸವಕ್ಕೆ ಕರಾವಳಿಯ ‘ಕೋರಿಕಟ್ಟ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 13:16 IST
Last Updated 3 ಸೆಪ್ಟೆಂಬರ್ 2018, 13:16 IST
ಟೀಮ್‌ ಮಂಗಳೂರಿನ ದಿನೇಶ್‌ ಹೊಳ್ಳ ಮತ್ತು ಸತೀಶ್‌ ರಾವ್‌ ಅವರು ಫ್ರಾನ್ಸ್‌ನ ಡೀಪಿಯಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ‘ಕೋರಿಕಟ್ಟ’ ಗಾಳಿಪಟ ಪ್ರದರ್ಶನ ಮಾಡಲಿದ್ದಾರೆ. 
ಟೀಮ್‌ ಮಂಗಳೂರಿನ ದಿನೇಶ್‌ ಹೊಳ್ಳ ಮತ್ತು ಸತೀಶ್‌ ರಾವ್‌ ಅವರು ಫ್ರಾನ್ಸ್‌ನ ಡೀಪಿಯಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ‘ಕೋರಿಕಟ್ಟ’ ಗಾಳಿಪಟ ಪ್ರದರ್ಶನ ಮಾಡಲಿದ್ದಾರೆ.    

ಮಂಗಳೂರು: ಫ್ರಾನ್ಸ್‌ನ ಡೀಪಿ ನಗರದಲ್ಲಿ ಇದೇ 8 ರಿಂದ 16ರವರೆಗೆ ನಡೆಯುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ಹವ್ಯಾಸಿ ಗಾಳಿಪಟ ತಂಡ ತೆರಳಲಿದೆ.

ಡೀಪಿ ಕ್ಯಾಪಿಟಲ್‌ ಆಫ್‌ ಕೈಟ್ಸ್‌ ಸಂಘಟನೆ ಈ ಉತ್ಸವ ಆಯೋಜಿಸಿತ್ತು. ಟೀಮ್‌ ಮಂಗಳೂರಿನ ಸದಸ್ಯರಾದ ದಿನೇಶ್‌ ಹೊಳ್ಳ ಮತ್ತು ಸತೀಶ್‌ ರಾವ್‌ ಅವರು ತುಳುನಾಡಿನ ‘ಕೋರಿದ ಕಟ್ಟ’ ಪರಿಕಲ್ಪನೆಯ 6 ಅಡಿ ಎತ್ತರದ ಬೃಹತ್‌ ಗಾಳಿಪಟವನ್ನು ಉತ್ಸವದಲ್ಲಿ ಹಾರಿಸಲಿದೆ. ಟೀಮ್‌ ಮಂಗಳೂರು ತಂಡದ ಮುಖ್ಯಸ್ಥರಾದ ಸರ್ವೇಶ್‌ ರಾವ್‌ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಗಾಳಿಪಟದ ವಿನ್ಯಾಸ ಮತ್ತು ಬಣ್ಣ ಸಂಯೋಜನೆಯನ್ನು ದಿನೇಶ್‌ ಹೊಳ್ಳ ಅವರು ಮಾಡಿದ್ದು, ಪ್ರಾಣೇಶ್‌ ಮತ್ತು ಸತೀಶ್‌ರಾವ್‌ ಅವರು ಹೊಲಿಗೆಯಲ್ಲಿ ಸಹಕರಿಸಿದ್ದಾರೆ. ಕೋರಿಕಟ್ಟ ಗಾಳಿಪಟ ವಿಭಿನ್ನವಾಗಿದೆ. ಕರಾವಳಿ ಕಡಲಿನಲ್ಲಿ ಸೂರ್ಯ ಮುಳುಗುವ ಸಂಕೇತವಾಗಿ ಕೇಸರಿ ಬಣ್ಣವನ್ನು ಒಂದೆಡೆ ಮತ್ತು ಕೋಳಿಗಳ ಚಿತ್ರಕ್ಕೆ ಬಿಳಿ ಬಣ್ಣದ ಹಿನ್ನೆಲೆಯನ್ನು ಬಳಸಲಾಗಿದೆ. ತುಳುನಾಡಿಗೆ ರಕ್ಷಣೆಯಾಗಿ ನಿಂತಿರುವ ಪಶ್ಚಿಮ ಘಟ್ಟದ ಸಂಕೇತವಾಗಿ ಹಸಿರು ಬಣ್ಣವನ್ನು ತಳಭಾಗದಲ್ಲಿ ಬಳಸಲಾಗಿದೆ. ಇದು ತ್ರಿವರ್ಣ ಧ್ವಜದ ಸಂಕೇತವೂ ಹೌದು ಎಂದು ಅವರು ವಿವರಿಸಿದರು.

ADVERTISEMENT

ಉತ್ಸವದ ಪ್ರಧಾನ ಪೋಸ್ಟರನ್ನೂ ರಚಿಸುವ ಅವಕಾಶ ದಿನೇಶ್‌ ಹೊಳ್ಳರಿಗೆ ದೊರೆತಿರುವುದು ಮತ್ತೊಂದು ವಿಶೇಷ. ಅಲ್ಲದೆ ಪಶ್ಚಿಮಘಟ್ಟದ ಬುಡಕಟ್ಟು ಜನಾಂಗದ ಹಾಲಕ್ಕಿ ಸಮುದಾಯವರ ಬದುಕಿನ ಬಗ್ಗೆ ಹಾಗೂ ಅವರ ಕಾಡು ರಕ್ಷಣೆ ಕಾಳಜಿ ಕುರಿತು ಬುಡಕಟ್ಟು ನಾಯಕಿ ಸುಕ್ರಿ ಬೊಮ್ಮ ಗೌಡ ಅವರನ್ನು ಕೇಂದ್ರೀಕರಿಸಿ 46 ಕಲಾಕೃತಿಗಳನ್ನು ಅವರು ರಚಿಸಿದ್ದು, ಹಾಲಕ್ಕಿ ಚಿತ್ರಕಲಾ ಪ್ರದರ್ಶನ ಎಂಬ ಶೀರ್ಷಿಕೆಯಲ್ಲಿ ಫ್ರಾನ್ಸ್‌ನ ಡೀಪಿಯಲ್ಲಿ ಪ್ರದರ್ಶನ ನಡೆಯಲಿದೆ.

ಗಾಳಿಪಟದಲ್ಲಿ ಕಥಕ್ಕಳಿ ಚಿತ್ರ ಸೃಷ್ಟಿಸುವ ಮೂಲಕ ಈಗಾಗಲೇ ಲಿಮ್ಕಾ ದಾಖಲೆ ಬರೆಯಲಾಗಿದೆ. ಇದೀಗ ಎಪ್ಲಿಕ್ ವರ್ಕ್‌ ನಲ್ಲಿ ಗಾಳಿಪಟ ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸರ್ವೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.