ADVERTISEMENT

ತೆಂಕಮಿಜಾರು ಗ್ರಾ.ಪಂ ಘಟಕ ಮಾದರಿ

ಹೊಸಬೆಟ್ಟು, ಪಡುಮಾರ್ನಾಡಿನಲ್ಲಿ ಸಾರ್ವಜನಿಕರ ವಿರೋಧ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 6 ಮಾರ್ಚ್ 2022, 6:21 IST
Last Updated 6 ಮಾರ್ಚ್ 2022, 6:21 IST
ಬೆಳುವಾಯಿಯಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ಸಂಗ್ರಹ ಘಟಕ
ಬೆಳುವಾಯಿಯಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ಸಂಗ್ರಹ ಘಟಕ   

ಮೂಡುಬಿದಿರೆ: ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ಯೋಜನೆಯಲ್ಲಿ ಮೂಡುಬಿದಿರೆ ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳ ಪೈಕಿ 10 ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ.

2017ರಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ತಾಲ್ಲೂಕಿನ ತೆಂಕಮಿಜಾರು ಗ್ರಾಮ ಪಂಚಾಯಿತಿ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಪ್ರಾರಂಭಿಸಿದೆ. ಅಂಗಡಿ, ಹೋಟೆಲ್, ಮನೆಗಳಿಂದ ಒಣ ಮತ್ತು ಹಸಿ ಕಸಗಳನ್ನು ವಾಹನಗಳ ಮೂಲಕ ಸಂಗ್ರಹಿಸಿ ಅದನ್ನು ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡುವ ಕಾರ್ಯ ಆಗಿನ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಮುತುವರ್ಜಿಯಲ್ಲಿ ಆರಂಭಗೊಂಡಿದ್ದು, ಈಗಲೂ ವ್ಯವಸ್ಥಿತವಾಗಿ ನಡೆಯುತ್ತಿದೆ. ನಂತರ ಇದೇ ಯೋಜನೆಯಲ್ಲಿ ಬೆಳುವಾಯಿಯಲ್ಲಿ ಸುಮಾರು ₹ 23 ಲಕ್ಷ ವೆಚ್ಚದಲ್ಲಿ ಮತ್ತು ಪುತ್ತಿಗೆಯಲ್ಲಿ ₹ 13.35 ಲಕ್ಷ ಅನುದಾನದಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ.

ತಾಲ್ಲೂಕಿನ ಶಿರ್ತಾಡಿ, ವಾಲ್ಪಾಡಿ, ಪಾಲಡ್ಕ, ನೆಲ್ಲಿಕಾರು, ದರೆಗುಡ್ಡೆ ಮತ್ತು ಕಲ್ಲಮುಂಡ್ಕೂರಿನಲ್ಲಿ ಸ್ವಚ್ಛ ಸಂಕೀರ್ಣ ಘಟಕ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ₹ 13 ಲಕ್ಷದಿಂದ ₹ 23 ಲಕ್ಷವರೆಗೆ ಅನುದಾನ ಒದಗಿಸಿದೆ.

ADVERTISEMENT

ಕಸ ಸಂಗ್ರಹಕ್ಕೆ ಗುಂಪು ರಚನೆ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ರಚನೆಯಾದ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿರುವ ಸ್ವಸಹಾಯ ಗುಂಪುಗಳು ಈ ಘಟಕವನ್ನು ನಿರ್ವಹಣೆ ಮಾಡುತ್ತವೆ. ಸದ್ಯ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಲೋಟ ಸೇರಿದಂತೆ ಒಣಕಸಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಅಂಗಡಿ, ಮನೆಗಳಿಗೆ ಪಂಚಾಯತಿ ವತಿಯಿಂದ ಬೋರೊ ಬ್ಯಾಗ್ ನೀಡಲಾಗಿದ್ದು ಕಸ ತುಂಬಿದ ಈ ಚೀಲವನ್ನು ವಾರಕ್ಕೆ ಎರಡು ಇಲ್ಲವೇ ಮೂರು ದಿನಗಳಿಗೊಮ್ಮೆ ಹತ್ತಿರದ ಅಂಗನವಾಡಿ, ಶಾಲೆಗಳಿಗೆ ಮನೆಯವರು ತಂದು ಕೊಡಬೇಕು. ಅಲ್ಲಿಂದ ವಾಹನಗಳ ಮೂಲಕ ತ್ಯಾಜ್ಯ ಘಟಕಕ್ಕೆ ಕೊಂಡೊಯ್ದು ಪ್ರತ್ಯೇಕಿಸಲಾಗುತ್ತದೆ. ಹೋಟೆಲ್, ಅಂಗಡಿಗಳಿಂದಲೂ ಇದೇ ರೀತಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಅಷ್ಟಾಗಿ ಸ್ಪಂದನೆ ಸಿಗುತ್ತಿಲ್ಲ ಎನ್ನಲಾಗಿದೆ.

ಕಸ ಸಂಗ್ರಹಕ್ಕೆ ಒಂದು ವಾಹನವಿದ್ದು ಚಾಲಕ ಮತ್ತು ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಾರೆ. ಕಸ ಸಂಗ್ರಹದಿಂದ ಬಂದ ಆದಾಯದಲ್ಲಿ ಚಾಲಕ, ಕಾರ್ಮಿಕರಿಗೆ ವೇತನ ನೀಡಲಾಗುತ್ತದೆ. ಬೆಳುವಾಯಿಯಲ್ಲಿ ಘಟಕಕ್ಕೆ ಸಂಪರ್ಕಿಸುವ ರಸ್ತೆ ಡಾಂಬರೀಕರಣಕ್ಕೆ ಬಾಕಿಯಿದ್ದು, ಶೀಘ್ರದಲ್ಲೇ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ ತಿಳಿಸಿದರು. ಶಿರ್ತಾಡಿಯಲ್ಲಿ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಬಾಕಿ ಇದೆ.

‘ಅಧಿಕಾರಿಗಳಿಗೆ ಸೂಚನೆ’

ಹೊಸಬೆಟ್ಟು ಮತ್ತು ಪಡುಮಾರ್ನಾಡಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಗುರುತಿಸಿದ ಜಾಗ ಜನವಸತಿ ಪ್ರದೇಶಕ್ಕೆ ಹತ್ತಿರ ಇದೆ ಎಂಬ ಕಾರಣಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಇಲ್ಲಿ ಯೋಜನೆ ಅನುಷ್ಠಾನ ವಿಳಂಬವಾಗಿದೆ.

‘ಜಾಗದ ಸಮಸ್ಯೆಯಿಂದ ಎರಡು ಕಡೆಗಳಲ್ಲಿ ಅನುಷ್ಠಾನ ವಿಳಂಬವಾಗಿದೆ. ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.