ADVERTISEMENT

ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:22 IST
Last Updated 31 ಜುಲೈ 2025, 7:22 IST
30ಪಿಟಿಆರ್4 : ಶಿಕ್ಷೆಗೊಳಗಾದ ಪೀರೇಶ್ ಯಾನೆ ಪೀರಪ್ಪ ಸಂಗಪ್ಪ ಮಾಲೋತ್ತರ 
30ಪಿಟಿಆರ್4 : ಶಿಕ್ಷೆಗೊಳಗಾದ ಪೀರೇಶ್ ಯಾನೆ ಪೀರಪ್ಪ ಸಂಗಪ್ಪ ಮಾಲೋತ್ತರ    

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ದಲಿತ ಕುಟುಂಬದ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ 7 ವರ್ಷದ ಹಿಂದಿನ ಪ್ರಕರಣದ ಆರೋಪಿ ಗದಗ ಜಿಲ್ಲೆ ರೋಣ ತಾಲ್ಲೂಕಿನ ದಿಂಡೂರು ಗ್ರಾಮದ ಗೌಡಗೇರಿ ಓಣಿ ನಿವಾಸಿ ಸಂಗಪ್ಪ ಅವರ ಪುತ್ರ ಪೀರೇಶ್ ಯಾನೆ ಪೀರಪ್ಪ ಸಂಗಪ್ಪ ಮಾಲೋತ್ತರ (35) ಎಂಬಾತನಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಪೀರೇಶ್ ಬಡಗನ್ನೂರು ಗ್ರಾಮದ ಕೆಂಪುಕಲ್ಲಿನ ಖ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. 2017ನೇ ಆಗಸ್ಟ್‌ನಲ್ಲಿ ಬಾಲಕಿಯನ್ನು ಪುಸಲಾಯಿಸಿಕೊಂಡು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ನಂತರ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಕಾರಣನಾಗಿದ್ದ ಎಂದು ಆರೋಪಿಸಲಾಗಿತ್ತು.

ಸಂಪ್ಯ ಠಾಣೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 18 ಸಾಕ್ಷಿಗಳ ವಿಚಾರಣೆ ನಡೆಸಿದೆ. ವಾದ ಆಲಿಸಿದ ನ್ಯಾಯಾಧೀಶೆ ಸರಿತಾ ಡಿ ಅವರು ಜೈಲು ಶಿಕ್ಷೆ ಮತ್ತು ಒಟ್ಟು ₹ 35 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಒಟ್ಟು 5 ವರ್ಷ ಸಾದಾ ಶಿಕ್ಷೆ ವಿಧಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂತ್ರಸ್ತ ಬಾಲಕಿಗೆ ₹ 6 ಲಕ್ಷ ಪರಿಹಾರ ರೂಪವಾಗಿ ನೀಡಬೇಕೆಂದು ಆದೇಶಿಸಿದ್ದಾರೆ.

ADVERTISEMENT

ತಲೆಮರೆಸಿಕೊಂಡಿದ್ದ ಪೀರೇಶ್

ಶಿಕ್ಷೆ ಖಚಿತ ಎಂಬ ಅರಿವಾಗಿದ್ದ ಪೀರೇಶ್ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ರವಿ ಬಿ.ಎಸ್, ಸಂಪ್ಯ ಠಾಣಾ ಎಸ್ಐ ಜಂಬೂರಾಜ್ ಬಿ.ಮಹಾಜನ್ ಹಾಗೂ ತನಿಖಾ ವಿಭಾಗದ ಎಸ್ಐ ಸುಷ್ಮಾ ಜಿ.ಭಂಡಾರಿ ಅವರ ನಿರ್ದೇಶನದಂತೆ ಸಂಪ್ಯ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಪ್ರವೀಣ್ ರೈ, ಹರೀಶ್, ಕಾನ್‌ಸ್ಟೆಬಲ್ ಚೋಳಪ್ಪ ಸಂಶಿ ಅವರು ಆರೋಪಿಯನ್ನು ದಿಂಡೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.