ADVERTISEMENT

ಮಂಗಳೂರು: ತೀರ್ಥ ಕೊಳದಲ್ಲಿ ಮುಳುಗಿದ್ದ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 10:12 IST
Last Updated 7 ಜನವರಿ 2020, 10:12 IST

ಮಂಗಳೂರು: ನಗರದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿರುವ ತೀರ್ಥ ಕೊಳಕ್ಕೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬೆಳಗಾವಿ ಜಿಲ್ಲೆಯ ಅಥಣಿಯ ತಾಲ್ಲೂಕಿನ ಸಂದೇಶ್‌ (10) ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮುಂಜಾನೆ ಮೃತಪಟ್ಟಿದ್ದಾನೆ.

ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎದುರಿಸಲು ಬೆಳಗಾವಿಯಿಂದ 60 ಬಾಲಕರು ಮತ್ತು ಐವರು ಶಿಕ್ಷಕರು ಬಂದಿದ್ದರು. ಭಾನುವಾರ ಬೆಳಿಗ್ಗೆ ಕೆನರಾ ಪ್ರೌಢ ಶಾಲೆಯಲ್ಲಿ ಪರೀಕ್ಷೆ ನಡೆದಿತ್ತು. ಸಂಜೆ ಎಲ್ಲರೂ ಕದ್ರಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಕೊಳದಲ್ಲಿ ಇಳಿದು ನೀರಿನಲ್ಲಿ ಆಟವಾಡುತ್ತಿದ್ದರು. ಆಗ ಸಂದೇಶ್‌ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ.

ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆ 3.30ಕ್ಕೆ ಸಂದೇಶ್‌ ಮೃತಪಟ್ಟಿದ್ದಾನೆ. ಈ ಸಂಬಂಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮೃತ ಸಂದೇಶ್ ಅಥಣಿ ತಾಲ್ಲೂಕಿನ ಶ್ರೀಪತಿ ಶಿಂಧೆ ಮತ್ತು ರಾಜಶ್ರೀ ದಂಪತಿಯ ಪುತ್ರ. ಶ್ರೀಪತಿ ಶಿಂಧೆ ಭೂ ಸೇನೆಯಲ್ಲಿದ್ದು, ಈಗ ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗನನ್ನು ಕೂಡ ಸೈನಿಕನನ್ನಾಗಿ ಮಾಡುವ ಕನಸಿನೊಂದಿಗೆ ಸೈನಿಕ ಶಾಲೆಗೆ ಸೇರಿಸಲು ಮುಂದಾಗಿದ್ದರು. ಇದಕ್ಕಾಗಿ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎದುರಿಸಲು ಮಗನಿಗೆ ತರಬೇತಿಯನ್ನೂ ಕೊಡಿಸುತ್ತಿದ್ದರು. ಅದರ ನಡುವೆಯೇ ಆತ ಪರೀಕ್ಷೆಗೆ ಬಂದಿದ್ದ ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.