ADVERTISEMENT

ಅವ್ಯವಹಾರ ನಡೆದ ದೇವಸ್ಥಾನ ವಶಕ್ಕೆ ಪಡೆಯಲು ಅವಕಾಶವಿದೆ: ರಾಮಲಿಂಗಾ ರೆಡ್ಡಿ

ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 7:48 IST
Last Updated 14 ಜುಲೈ 2025, 7:48 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಉಳ್ಳಾಲ (ದಕ್ಷಿಣ ಕನ್ನಡ ಜಿಲ್ಲೆ): ‘ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಅವುಗಳನ್ನು ಐದು ವರ್ಷ ಸರ್ಕಾರದ ವಶಕ್ಕೆ ಪಡೆಯಲು ಅವಕಾಶ ಇದೆ’ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಬೆಂಗಳೂರು ಗಾಳಿ ಆಂಜನೇಯ ದೇವಸ್ಥಾನ ಸರ್ಕಾರದ ವಶಕ್ಕೆ ವಿಚಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಸಚಿವರು, ‘ಗಾಳಿ ಆಂಜನೇಯ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದೆ. ಹಣ ತೆಗೆದುಕೊಂಡು ಹೋಗುವ ವಿಡಿಯೊವನ್ನು ಜನ ನೋಡಿದ್ದಾರೆ. ಐದು ವರ್ಷ ಆದ ಮೇಲೆ ದೇವಸ್ಥಾನವನ್ನು ಬೇಕಿದ್ದರೆ ಅವರಿಗೆ ಮರಳಿಸಬಹುದು’ ಎಂದರು.

‘ಬಿಜೆಪಿ ನೇತೃತ್ವದ ಸರ್ಕಾರವೂ ಅವ್ಯವಹಾರ ನಡೆದಿದ್ದ ಎಂಟು ದೇವಸ್ಥಾನಗಳನ್ನು ವಶಕ್ಕೆ ಪಡೆದಿತ್ತು. ಅಂದು ಯಾರೂ ಮಾತನಾಡಿಲ್ಲ. ಗಾಳಿ ಆಂಜನೇಯ ದೇವಸ್ಥಾನದಲ್ಲಿ 25 ವರ್ಷದಿಂದ ಅವ್ಯವಹಾರ ನಡೆಯುತ್ತಿದೆ. ಅವ್ಯವಹಾರಕ್ಕೆ ಅವಕಾಶವಿಲ್ಲದಂತೆ ನಿರ್ವಹಣೆ ಮಾಡುವುದಾಗಿ ಆಡಳಿತ ಮಂಡಳಿ ಹೇಳಿದರೆ ವಾಪಸ್‌ ನೀಡಲಾಗುವುದು’ ಎಂದರು.

ADVERTISEMENT

‘ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ತಮ್ಮ ಆಸ್ತಿಯನ್ನು ದೇಶಕ್ಕೆ ಬರೆದುಕೊಟ್ಟಿದ್ದಾರೆ. ಬಿಜೆಪಿಯವರು ಯಾರಾದರೂ ಬರೆದು ಕೊಟ್ಟಿದ್ದಾರಾ. ನೆಹರೂ ಬಗ್ಗೆ ಈಗಲೂ ಬಿಜೆಪಿಯವರು ನಕಾರಾತ್ಮಕವಾಗಿ ಮಾತನಾಡುತ್ತಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಷಿ ರಾಜ್ಯ, ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ನಕಾರಾತ್ಮಕವಾಗಿ ಮಾತ್ರ ಮಾತನಾಡುತ್ತಾರೆ’ ಎಂದರು.

‘ನಮ್ಮಲ್ಲಿ ಖರೀದಿಗೆ ಯಾರೂ ಲಭ್ಯರಿಲ್ಲ. ‌ಸಿದ್ದರಾಮಯ್ಯ ಅವರಿಗೆ ಡಿ.ಕೆ. ಶಿವಕುಮಾರ್‌ ಸೇರಿದಂತೆ ಎಲ್ಲರ ಬೆಂಬಲ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಒಂದೇ ನಾಣ್ಯದ ಎರಡು ಮುಖಗಳು. ಡಿ.ಕೆ. ಶಿವಕುಮಾರ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಪೂಜೆಗಾಗಿ ದೆಹಲಿಗೆ ಹೋಗಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.