ಮಂಗಳೂರು: ಕೆಲಸ ಕೊಡಿಸುವ ಆಮಿಷವೊಡ್ಡಿ ಕಾಂಬೋಡಿಯಾಕ್ಕೆ ಕರೆದೊಯ್ದು ಜನರನ್ನು ವಂಚಿಸುವ ಕೆಲಸ ನೀಡಿದ ಕುರಿತು ಹಾಗೂ ಅಲ್ಲಿಂದ ಕಷ್ಟಪಟ್ಟು ತಪ್ಪಿಸಿಕೊಂಡು ಬಂದ ಕುರಿತು ಇಬ್ಬರು ಸಂತ್ರಸ್ತರು ದೂರು ನೀಡಿದ್ದು, ಕೊಣಾಜೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
‘ಥಾಯ್ಲೆಂಡ್‌ನ ಡೇಟಾ ಕಾಲ್ ಸೆಂಟರ್‌ನಲ್ಲಿ ತಿಂಗಳಿಗೆ ₹ 60 ಸಾವಿರ ಸಂಬಳದ ಕೆಲಸ ಇರುವ ಬಗ್ಗೆ ಇನ್‌ಸ್ಟ್ರಾಗ್ರಾಂ ಆ್ಯಪ್‌ನ ಜಾಹೀರಾತಿನ ಮೂಲಕ ತಿಳಿಯಿತು. ವೀಸಾ ಮಾಡಿಸಲು ಡೇವಿಡ್ ಎಂಬ ವ್ಯಕ್ತಿ ನೀಡಿದ ಮಾಹಿತಿಯಂತೆ ₹ 60 ಸಾವಿರ ಕಟ್ಟಿದ್ದೆ. 2023ರ ಸೆಪ್ಟೆಂಬರ್‌ನಲ್ಲಿ ಥಾಯ್ಲೆಂಡ್ ತಲುಪಿದ್ದೆ. ಅಲ್ಲಿಂದ ಕೊಲಂಬಿಯಾದ ಗಡಿಗೆ ಕರೆದೊಯ್ದಿದ್ದರು. ಬಳಿಕ ಬೇರೆ ಕಾರಿನಲ್ಲಿ ರಾತ್ರಿ ವೇಳೆಗೆ ಫ್ಲ್ಯಾಟ್ ಒಂದಕ್ಕೆ ಕರೆದೊಯ್ದಿದ್ದರು. ನನ್ನ ನಿಜವಾದ ಹೆಸರನ್ನು ಬದಲಿಸಿ ಚಾರ್ಲಿ ಎಂಬುದಾಗಿ ಹೆಸರಿಟ್ಟಿದ್ದರು.’
‘ನನಗೆ ವಹಿಸಿದ ಕೆಲಸ ಜನರನ್ನು ವಂಚನೆಗೆ ಒಳಪಡಿಸುವುದು ಎಂದು ಗೊತ್ತಾಯಿತು. ಅದಕ್ಕೆ ನಾನು ಒಪ್ಪಲಿಲ್ಲ. ಹತ್ತು ದಿವಸದ ಬಳಿಕ ಅವರಲ್ಲಿ ಪಾಸ್ ಪೋರ್ಟ್ ಮರಳಿಸುವಂತೆ ಕೇಳಿದಾಗ, ₹ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟರು. ಆರೋಪಿಗಳ ಕಣ್ಣು ತಪ್ಪಿಸಿ ಫನೊಮ್ ಫೆನ್ ಊರಿಗೆ ತೆರಳಿ ಭಾರತೀಯರು ನಡೆಸುವ ಹೋಟೆಲ್‌ನಲ್ಲಿ ಸೇರಿಕೊಂಡೆ. ಅಲ್ಲಿದ್ದವರಿಗೆ ನಡೆದ ವಿಚಾರವನ್ನು ತಿಳಿಸಿದ್ದೆ. ಅವರ ನೆರವಿನಿಂದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೆ. ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ವೈಟ್ ಪಾಸ್ ಪೋರ್ಟ್ ಪಡೆದು 2023ರ ಅಕ್ಟೋಬರ್‌ನಲ್ಲಿ ಊರಿಗೆ ಮರಳಿದ್ದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘2023ರ ಆಗಸ್ಟ್‌ನಲ್ಲಿ ಇನ್ಸ್ಟಾಗ್ರಾಂ ಮೂಲಕ ಕಾಂಬೋಡಿಯಾ ದೇಶದಲ್ಲಿ ಕೆಲಸ ವಿರುವ ಬಗ್ಗೆ ಜಾಹಿರಾತು ಬಂದಿತ್ತು. ತಿಂಗಳಿಗೆ ₹ 80 ಸಾವಿರ ದಿಂದ ₹ 90 ಸಾವಿರ ಸಂಬಳದ ಜೊತೆಗೆ ಊಟ ಮತ್ತು ವಸತಿ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು. ಅದಕ್ಕೆಅರ್ಜ ಹಾಕಿದಾಗ ಚೀನಿ ಭಾಷೆಯಲ್ಲಿ ಸಂದೇಶ ಬಂದಿತ್ತು. ಟೆಲಿಗ್ರಾಂ ಮತ್ತೊಂದು ಸಂದೇ ಕಳುಹಿಸಿದ್ದ ಆ ಸಂಸ್ಥೆಯವರು ₹ 60 ಸಾವಿರದಷ್ಟು ಮೊತ್ತವನ್ನು ಥಾಯ್ಲೆಂಡ್ ಕರೆನ್ಸಿಯಲ್ಲಿ ನೀಡುವಂತೆ ತಿಳಿಸಿದ್ದರು. ಅದರ ಜೊತೆ ₹ 40 ಸಾವಿರ ಖರ್ಚುಮಾಡಿ 2023ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಥಾಯ್ಲೆಂಡ್ ತಲುಪಿದ್ದೆ ಎಂದು ಇನ್ನೊಬ್ಬ ಸಂತ್ರಸ್ತ ದೂರಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಥಾಯ್ಲೆಂಡ್‌ನಿಂದ ಕಾಂಬೋಡಿಯಾದ ಗಡಿ ಭಾಗಕ್ಕೆ ಕರೆದೊಯ್ದಿದ್ದರು. ಅಲ್ಲಿ ಮೈಕಿ ಎಂಬ ಚೀನಾ ಏಜೆಂಟ್ ನನ್ನ ಪಾಸ್‌ಪೋರ್ಟ್ ಪಡೆದು ಕಾಂಬೋಡಿಯಾದ ಪಾಸ್‌ಪೋರ್ಟ್ ಕಚೇರಿಯಲ್ಲಿ ವೀಸಾ ಕೊಡಿಸಿದ್ದ. ನನ್ನ ಹೆಸರನ್ನು ಸ್ಯಾಮ್ ಎಂದು ಬದಲಾಯಿಸಿದ್ದ. ಬಳಿಕ ನನ್ನನ್ನು ಜೂಜು ಕೇಂದ್ರದಲ್ಲಿ ಕೆಲಸ ವಹಿಸಿದ್ದ. ಇದಕ್ಕಾಗಿ ಒಂದು ತಿಂಗಳ ತರಬೇತಿ ಕೊಟ್ಟಿದ್ದ. ಈ ಕೆಲಸ ಮಾಡಲು ಮನಸ್ಸು ಒಪ್ಪುವುದಿಲ್ಲ. ಊರಿಗೆ ಮರಳುತ್ತೇನೆ ಎಂದು ತಿಳಿಸಿದ್ದೆ. ಅದಕ್ಕೆ ₹ 6 ಲಕ್ಷ ಹಣ ಕಟ್ಟುವಂತೆ ಸೂಚಿಸಿದರು. ಅಷ್ಟೊಂದು ಹಣ ಇಲ್ಲದೇ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದೆ. ಅವರ ಗುರಿ ತಲುಪಲು ಸಾಧ್ಯವಾಗದೇ ಇದ್ದಾಗ ದಿನದಲ್ಲಿ 16 ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡಿಸಿ ಅರ್ಧ ಸಂಬಳ ನೀಡುತ್ತಿದ್ದರು. 8 ತಿಂಗಳು ಅಲ್ಲೇ ಕೆಲಸ ಮಾಡಿ ಆರೋಪಿಗೆ ₹ 2.5 ಲಕ್ಷ ಹಣ ಕೊಟ್ಟು ಪಾಸ್‌ಪೋರ್ಟ್ ಹಿಂಪಡೆದು 2024ರ ಏ 16ರಂದು ಊರಿಗೆ ಮರಳಿದ್ದೇನೆ ಎಂದು ಇನ್ನೊಬ್ಬ ಸಂತ್ರಸ್ತ ಮಾಹಿತಿ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.