ADVERTISEMENT

ಆರೋಪಿ ಬಂಧನ; ಕಾರಿನಲ್ಲಿದ್ದ ಸ್ಪ್ಯಾನರ್‌ ವಶ

ಶಾಸಕರ ಕಾರು ಬೆನ್ನಟ್ಟಿ ಬೆದರಿಕೆ ಒಡ್ಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 1:55 IST
Last Updated 16 ಅಕ್ಟೋಬರ್ 2022, 1:55 IST

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರ ಕಾರನ್ನು ಬೆನ್ನಟ್ಟಿ ಬೆದರಿಕೆ ಒಡ್ಡಿದ ಪ್ರಕರಣ ಆರೋಪಿ ನಗರದ ಫಳ್ನೀರ್‌ ನಿವಾಸಿ ರಿಯಾಜ್‌ (38) ಎಂಬಾತನನ್ನು ಬಂಧಿಸಿರುವಪೊಲೀಸರು ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಈ ಪ್ರಕರಣದಲ್ಲಿ, ಶಾಸಕರ ಕಾರನ್ನು ಹಿಂಬಾಲಿಸಲು ಬಳಕೆ ಆಗಿದೆ ಎನ್ನಲಾದ ಸ್ಕಾರ್ಪಿಯೊ ವಾಹನದಲ್ಲಿದ್ದ ಸ್ಪ್ಯಾನರ್‌ ಅನ್ನು ಹಾಗೂ ಆರೋಪಿ ಬಳಿ ಇದ್ದ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಆರೋಪಿಯ ಮನೆಯಲ್ಲಿ ಶೋಧ ನಡೆಸಲಾಗಿದ್ದು, ಆತನ ಬಳಿ ಇದ್ದ ಎರಡು ಮೊಬೈಲ್‌ ಪೋನ್‌ಗಳನ್ನು ಹಾಗೂ ವಾಹನದಲ್ಲಿದ್ದ ಸ್ಪ್ಯಾನರ್‌ ಅನ್ನು ವಶಪಡಿಸಿಕೊಂಡಿದ್ದೇವೆ. ಇಂಗ್ಲಿಷ್‌ ಅಕ್ಷರ ಎಲ್‌ ಆಕಾರದ ಸ್ಪ್ಯಾನರ್‌ ಅನ್ನು ಆರೋಪಿಯು ಶಾಸಕರ ಕಾರು ಚಾಲಕನತ್ತ ಬೀಸಿದ್ದ. ಚಾಲಕನಿಗೆ ಬೈಯುವಾಗ ಅದನ್ನು ತೋರಿಸಿದ್ದ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ತಿಳಿಸಿದರು.

ADVERTISEMENT

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಗುರುವಾರ ರಾತ್ರಿ ಮಂಗಳೂರಿನಿಂದ ಬಂಟ್ವಾಳದ ಕಡೆಗೆ ತೆರಳುತ್ತಿದ್ದಾಗ ಅವರ ಕಾರನ್ನು ಬೆನ್ನಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಲಾಗಿದೆ ಎಂದು ಕಾರಿನ ಚಾಲಕ ನವೀನ್‌ ದೂರು ನೀಡಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

–0–

‘ಪ್ರಕರಣವನ್ನು ಲಘುವಾಗಿ ಪರಿಗಣಿಸದಿರಿ’

‘ಶಾಸಕ ಹರೀಶ್‌ ಪುಮಜ ಅವರ ಕಾರನ್ನು ಬೆನ್ನಟ್ಟಿ ಬೆದರಿಕೆ ಒಡ್ಡಿದ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿಂದಿನ ಪೂರ್ಣ ವಿಚಾರಗಳನ್ನು ತನಿಖೆಗೆ ಒಳಪಡಿಸಬೇಕು. ಕೇರಳದಿಂದ ಬಂದವರು ವಿಧ್ವಂಸಕ ಕೃತ್ಯ ನಡೆಸುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವರದಿ ನೀಡಿದೆ. ಇದರ ಆಧಾರದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು’ ಎಂದು ಸಂಸದ ನಳಿನ್‌ ಕುಮಾರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.