ADVERTISEMENT

ಉಜಿರೆ | ಗುಡುಗು ಸಹಿತ ಮಳೆ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 14:12 IST
Last Updated 25 ಏಪ್ರಿಲ್ 2025, 14:12 IST
ದೈವಸ್ಥಾನದ ಮೇಲೆ ಉರುಳಿದ ಮರ
ದೈವಸ್ಥಾನದ ಮೇಲೆ ಉರುಳಿದ ಮರ    

ಉಜಿರೆ: ಮುಂಡಾಜೆ, ನೆರಿಯ, ಕಲ್ಮಂಜ, ಉಜಿರೆ, ಚಾರ್ಮಾಡಿ ಪ್ರದೇಶದಲ್ಲಿ ಗುರುವಾರ ರಾತ್ರಿ ಗುಡುಗು, ಗಾಳಿ ಸಹಿತ ಜಡಿ ಮಳೆಯಾಗಿದ್ದು ಅಪಾರ ಹಾನಿ ಉಂಟಾಗಿದೆ.

ಮಳೆಯ ಬೆನ್ನಲ್ಲೇ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು ಜನರು ರಾತ್ರಿಯಿಡೀ ತೊಂದರೆ ಅನುಭವಿಸಿದರು. ಮುಂಡಾಜೆ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ದೈವಸ್ಥಾನದ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ.

ಕಲ್ಮಂಜ-ಧರ್ಮಸ್ಥಳ ರಸ್ತೆಯ ಪಿಲತ್ತಡ್ಕ ಎಂಬಲ್ಲಿ ವಿದ್ಯುತ್ ಲೈನ್ ಮೇಲೆ ಮರದ ಕೊಂಬೆ ಬಿದ್ದು ವಿದ್ಯುತ್ ತಂತಿಗೆ ಹಾನಿಯಾಗಿದೆ. ಕಡಂಬಳ್ಳಿಯ ಕೊಚ್ಚಿ ಎಂಬಲ್ಲಿ ವಿದ್ಯುತ್ ಕಂಬ ಮುರಿದಿದೆ. ಹಲವೆಡೆ ಅಡಿಕೆ ಮತ್ತು ರಬ್ಬರ್ ಮರಗಳು ಮುರಿದು ಬಿದ್ದಿವೆ.

ADVERTISEMENT

ಧರ್ಮಸ್ಥಳದಲ್ಲಿ ಮೇ 3ರಂದು ಉಚಿತ ಸಾಮೂಹಿಕ ವಿವಾಹ 

ಉಜಿರೆ: ಧರ್ಮಸ್ಥಳದಲ್ಲಿ ಮೇ 3ರಂದು  53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಈಗಾಗಲೇ 100 ಜೋಡಿಗಳು ಮದುವೆಯಾಗಲು ಹೆಸರು ನೋಂದಾಯಿಕೊಂಡಿದ್ದಾರೆ. ಮೇ 2ರಂದು ವಧು–ವರರು ಧರ್ಮಸ್ಥಳಕ್ಕೆ ಬಂದು ಮದುವೆಗೆ ಬೇಕಿರುವ ಪ್ರಮಾಣಪತ್ರಗಳ ಮೂಲಪ್ರತಿಗಳನ್ನು ಸಲ್ಲಿಸಬೇಕು. ಪರಿಶೀಲನೆಯಲ್ಲಿ ಅವು ಕ್ರಮಬದ್ಧವಾಗಿದ್ದರೆ ಮಾತ್ರ ಮದುವೆಗಾಗಿ ವರನಿಗೆ ಧೋತಿ, ಶಾಲು, ಹಾರ ಹಾಗೂ ವಧುವಿಗೆ ಸೀರೆ, ರವಿಕೆ ನೀಡಲಾಗುವುದು.

ವರದಕ್ಷಿಣೆ ಹಾಗೂ ದುಂದುವೆಚ್ಚ ತಡೆಯುವ ಉದ್ದೇಶದಿಂದ 1972ರಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಚಿತ ಸಾಮೂಹಿಕ ವಿವಾಹವನ್ನು ಆರಂಭಿಸಿದ್ದರು.  ಈ ಯೋಜನೆಯಡಿ ಕಳೆದ ಸಾಲಿನವರೆಗೆ12,900 ಜೋಡಿಗಳು ವಿವಾಹಿತರಾಗಿದ್ದಾರೆ. ಸರ್ಕಾರದ ನಿಯಮದಂತೆ ಸಾಮೂಹಿಕ ವಿವಾಹದ ದಿನ ಅಧಿಕಾರಿಗಳು ಸ್ಥಳದಲ್ಲಿದ್ದು, ಮದುವೆ ಬಳಿಕ ವಿವಾಹ ನೋಂದಣಿ ಪ್ರಮಾಣಪತ್ರವನ್ನೂ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.