ADVERTISEMENT

ಸ್ಥಳೀಯರಿಗೆ ಆದ್ಯತೆ ಸಿಗುವ ರಾಷ್ಟ್ರೀಯ ಉದ್ಯೋಗ ನೀತಿ ಅಗತ್ಯ

ʼಕನ್ನಡ ಅಭಿವೃದ್ಧಿ ಪ್ರಾಧಿಕಾರ- 30’ ವಿಚಾರ ಸಂಕಿರಣದಲ್ಲಿ ರಾ.ನಂ.ಚಂದ್ರಶೇಖರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 10:37 IST
Last Updated 13 ಜೂನ್ 2022, 10:37 IST
‘ಕನ್ನಡ ಸಾಹಿತ್ಯ- ಕೆಲವ ಒಳನೋಟಗಳುʼ ಎಂಬ ಕೃತಿಯನ್ನು ಟಿ.ಎಸ್.ನಾಗಾಭರಣ ಅವರು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಸಂತೋಷ ಹಾನಗಲ್ಲ, ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ, ಪ್ರಾಧಿಕಾರದ ಸದಸ್ಯ ಡಾ. ರಮೇಶ್ ಗುಬ್ಬಿಗೂಡು, ಕೃತಿಯ ಲೇಖಕ ಡಾ. ಮಾಧವ ಎಂ.ಕೆ. ಇದ್ದಾರೆ
‘ಕನ್ನಡ ಸಾಹಿತ್ಯ- ಕೆಲವ ಒಳನೋಟಗಳುʼ ಎಂಬ ಕೃತಿಯನ್ನು ಟಿ.ಎಸ್.ನಾಗಾಭರಣ ಅವರು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಸಂತೋಷ ಹಾನಗಲ್ಲ, ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ, ಪ್ರಾಧಿಕಾರದ ಸದಸ್ಯ ಡಾ. ರಮೇಶ್ ಗುಬ್ಬಿಗೂಡು, ಕೃತಿಯ ಲೇಖಕ ಡಾ. ಮಾಧವ ಎಂ.ಕೆ. ಇದ್ದಾರೆ   

ಮಂಗಳೂರು: ‘ಸರ್ಕಾರಿ ಹಾಗೂ ಖಾಸಗಿ ರಂಗದ ಉದ್ಯೋಗಗಳೆರಡರಲ್ಲೂ ಸ್ಥಳೀಯರಿಗೆ ಆದ್ಯತೆ ಸಿಗುವ ರಾಷ್ಟ್ರೀಯ ಉದ್ಯೋಗ ನೀತಿಯ ಅಗತ್ಯವಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್‌ ಒತ್ತಾಯಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ- 30’ ವಿಚಾರ ಸಂಕಿರಣದಲ್ಲಿ ಅವರು ರಾಷ್ಟ್ರೀಯ ಉದ್ಯೋಗ ನೀತಿ ಮತ್ತು ಪರಿಷ್ಕೃತ ಮಹಿಷಿ ವರದಿಯ ಮಹತ್ವದ ಕುರಿತು ಮಾತನಾಡಿದರು.

‘ದೇಶದಲ್ಲಿ ಭಾಷೆ ಆಧಾರದಲ್ಲಿ ಪ್ರತ್ಯೇಕತಾ ಹೋರಾಟಗಳು ನಡೆಯುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಐಕ್ಯತಾ ಸಮಿತಿಯು ಬಹುಪಾಲು ಉದ್ಯೋಗಗಳನ್ನು ಸ್ಥಳೀಯರಿಗೆ ಆದ್ಯತೆ ಮೇರೆಗೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.ಸರೋಜಿನಿ ಮಹಿಷಿ ಅವರ ನೇತೃತ್ವದ ಸಮಿತಿ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಶಿಫಾರಸನ್ನು ಹೊಂದಿರುವ ವರದಿಯನ್ನು 1986ರಲ್ಲೇ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು 2016ರಲ್ಲಿ ಪರಿಷ್ಕರಿಸಲಾಗಿದೆ. ಖಾಸಗಿ ರಂಗ, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬ್ಯಾಂಕಿಂಗ್‌ ಕ್ಷೇತ್ರದ ಉದ್ಯೋಗಗಳಲ್ಲೂ ಸ್ಥಳೀಯರಿಗೆ ಮೀಸಲಾತಿ ಜಾರಿಗೊಳಿಸಬೇಕು ಎಂದು ತಿದ್ದುಪಡಿ ಮಾಡಲಾಗಿದೆ. ಸರ್ಕಾರ ಇನ್ನೂ ಈ ವರದಿಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿಲ್ಲ’ ಎಂದು ಬೇಸರ ತೋಡಿಕೊಂಡರು.

ADVERTISEMENT

ಸ್ನೇಹ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ದಾಮ್ಲೆ, ‘ಸರೋಜಿನಿ ಮಹಿಷಿ ವರದಿ ಜಾರಿ ಆಗದಿರುವುದರ ದುಷ್ಪರಿಣಾಮವನ್ನು ಗ್ರಾಮೀಣ ಪ್ರದೇಶದ ಬ್ಯಾಂಕ್‌ಗಳಲ್ಲಿ ಕಾಣುತ್ತಿದ್ದೇವೆ. ಕನ್ನಡವೇ ಗೊತ್ತಿಲ್ಲದ ಅಧಿಕಾರಿಗಳಲ್ಲಿ ಗ್ರಾಹಕರು ವ್ಯವಹರಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಸೃಜನಾತ್ಮಕ ಕೆಲಸಗಳಿಗೆ ಕನ್ನಡಿಗರು ಸಿದ್ಧರಿಲ್ಲ. ಕನ್ನಡಿಗರಲ್ಲಿ ವೃತ್ತಿ ಪ್ರಜ್ಞೆ ಬೆಳೆಸುವ ಅನಿವಾರ್ಯ ಇದೆ. ಲಭ್ಯ ಇರುವ ಉದ್ಯೋಗಗಳನ್ನಾದರೂ ನಮ್ಮವರಿಗೆ ಕೊಡಿಸಲು ಕನ್ನಡಿಗರು ಪ್ರಯತ್ನಿಸಬೇಕು’ ಎಂದರು.

ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ ಎನ್ ನರಸಿಂಹಮೂರ್ತಿ, ‘ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳು ಸೇರಿದಂತೆ ಎಲ್ಲ ಕಡೆಯೂ ಕನ್ನಡ ಬಳಕೆ ಕಡ್ಡಾಯಗೊಳಿಸಿದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ’ ಎಂದು ಸಲಹೆ ನೀಡಿದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ‘ಪ್ರಾಧಿಕಾರದ 30ನೇ ವರ್ಷಾಚರಣೆ ಸಲುವಾಗಿ ಮಕ್ಕಳ ಸಾಹಿತ್ಯದ 19 ಪುಸ್ತಕಗಳು ಜುಲೈ 8ರಂದು ಬಿಡುಗಡೆ ಆಗಲಿವೆ. ಕನ್ನಡ ಪದ ಬಳಕೆ ಹೆಚ್ಚಿಸಲು ಪ್ರಾಧಿಕಾರದ ‘ಪದಕಣಜ’ ಆ್ಯಪ್‌ನಲ್ಲಿ 6.5 ಲಕ್ಷ ಕನ್ನಡ ಪರ್ಯಾಯ ಪದಗಳನ್ನು ಒದಗಿಸಲಾಗಿದೆ’ ಎಂದರು.

’ಚಾಣಕ್ಯ ಕೆರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ್, ಭಾರತ್ ಎಲೆಕ್ಟ್ರಾನಿಕ್ಸ್ ರಾಜಭಾಷ ವಿಭಾಗದ ಉಪ ವ್ಯವಸ್ಥಾಪಕ ಡಾ. ಎಚ್.ಎಲ್ ಗೋಪಾಲಕೃಷ್ಣ ಮತ್ತು ಮಾಹಿತಿ ತಂತ್ರಜ್ಞಾನ ತಜ್ಞ ಡಾ.ಉದಯ ಶಂಕರ ಪುರಾಣಿಕ, ಎಚ್ಎಎಲ್‌ನ ನಿವೃತ್ತ ಮಹಾ ವ್ಯವಸ್ಥಾಪಕ ಬಾ.ಹ.ಉಪೇಂದ್ರ, ತೆಂಕ ನಿಡಿಯೂರಿನ ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.‌ಗಣನಾಥ ಶೆಟ್ಟಿ ಎಕ್ಕಾರು, ವಿಜ್ಞಾನ ಲೇಖಕಿ ಕ್ಷಮಾ ಭಾನುಪ್ರಕಾಶ್ ವಿಚಾರ ಮಂಡಿಸಿದರು.

‘ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ’

‘ಆಡಳಿತವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯನ್ನು ಸಂಪೂರ್ಣ ಜಾರಿಗೆ ತರುವ ಪ್ರಯತ್ನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮಾಡುತ್ತಲೇ ಇದೆ. ಆದರೆ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಇದು ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯ’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ಯಾಜೆಟ್‌ಗಳ ಅತಿ ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ‘ಈ ಸಾಧನಗಳು ನೆನಪಿನ ಶಕ್ತಿಯನ್ನೇ ಕಸಿದುಕೊಳ್ಳುತ್ತಿವೆ. ಇದನ್ನು ತಪ್ಪಿಸಲು ಡಿಜಿಟಲ್‌ ಉಪವಾಸ ಮಾಡುವುದನ್ನು ರೂಡಿಸಿಕೊಳ್ಳಬೇಕು. ಮೊಬೈಲ್‌ ಬಳಕೆ ಜ್ಞಾನಾರ್ಜನೆಗೆ ಸೀಮಿತವಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.