ADVERTISEMENT

ಮಂಗಳೂರು: ಗಡುವು ಅಂತಿಮ: ಮುಂದುವರಿದ ಸುರತ್ಕಲ್ ಟೋಲ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:47 IST
Last Updated 23 ಜೂನ್ 2022, 2:47 IST

ಮಂಗಳೂರು: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 60 ಕಿ.ಮೀ ಅಂತರದ ನಡುವೆ ಇರುವ ಟೋಲ್‌ಗೇಟ್‌ಗಳನ್ನು ಬಂದ್‌ ಮಾಡುವುದಾಗಿ ಹೇಳಿದ ಅಂತಿಮ ಗುಡುವು ಬುಧವಾರಕ್ಕೆ ಮುಗಿದಿದೆ. ಆದರೆ, ಮಂಗಳೂರು ಹೊರವಲಯದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ಇನ್ನೂ ಮುಂದುವರಿದಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.

‘ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಡಾ. ವೈ. ಭರತ್‌ ಶೆಟ್ಟಿ ಅವರಿಗೆ ಕೊಟ್ಟ ಮಾತಿನಂತೆ ಟೋಲ್‌ಗೇಟ್ ತೆರವುಗೊಳಿಸಲು ಆಗಲಿಲ್ಲ. ಪ್ರಸ್ತುತ ಇನ್ನೊಂದು ಅವಕಾಶ ಇದ್ದು, ಸುರತ್ಕಲ್ ಟೋಲ್ ಸಂಗ್ರಹ ಗುತ್ತಿಗೆ ಇನ್ನೊಂದು ವಾರದಲ್ಲಿ ಮುಗಿಯುತ್ತದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುರುವಾರ (ಜೂನ್‌ 23) ಟೆಂಡರ್ ತೆರೆಯಲಾಗುತ್ತದೆ. ಲಭ್ಯ ಮಾಹಿತಿಯಂತೆ ಯಾವ ಗುತ್ತಿಗೆದಾರನೂ ಟೋಲ್ ಸಂಗ್ರಹ ಗುತ್ತಿಗೆ ಪಡೆಯಲು ಅರ್ಜಿ ಹಾಕಿಲ್ಲ. ಈ ಸಂದರ್ಭದಲ್ಲಿ ಸುರತ್ಕಲ್ ಟೋಲ್ ಕೇಂದ್ರವನ್ನು ಬಂದ್ ಮಾಡಬಹುದು’ ಎಂದು ಸಲಹೆ ನೀಡಿದೆ.

ಸಚಿವ ನಿತಿನ್‌ ಗಡ್ಕರಿ ಅವರು 60 ಕಿ.ಮೀ ಅಂತರದಲ್ಲಿ ಇರುವ ಟೋಲ್‌ ಕೇಂದ್ರಗಳನ್ನು ಮೂರು ತಿಂಗಳುಗಳ ಒಳಗೆ ಬಂದ್ ಮಾಡುವುದಾಗಿ ಮಾರ್ಚ್ 22ರಂದು ಲೋಕಸಭೆಯಲ್ಲಿ ಹೇಳಿದ್ದರು. ಸುರತ್ಕಲ್ ಮತ್ತು ಪಡುಬಿದ್ರಿ ನಡುವೆ 12 ಕಿ.ಮೀ ಅಂತರದಲ್ಲಿ ಎರಡು ಟೋಲ್‌ ಕೇಂದ್ರಗಳು ಇದ್ದು, ಸುರತ್ಕಲ್ ಟೋಲ್‌ ಕೇಂದ್ರ ಬಂದ್ ಮಾಡುವಂತೆ ಸಾರ್ವಜನಿಕರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.