ಮಂಗಳೂರು: ಸವಾಲುಗಳನ್ನು ಮೆಟ್ಟಿ ಮುನ್ನುಗ್ಗುವ ಛಾತಿ, ಡಿಜಿಟಲ್ ಜ್ಞಾನ, ಲಿಂಕ್ಡ್ಇನ್, ಇನ್‌ಸ್ಟಾಗ್ರಾಂನಂತಹ ಪ್ರಚಲಿತ ಸಾಮಾಜಿಕ ಜಾಲತಾಣಗಳನ್ನು ಗಮನಿಸುವ ಸೂಕ್ಷ್ಮಮತಿ, ಕ್ರಿಯಾಶೀಲ ಯೋಜನೆಗಳ ಬುತ್ತಿ, ಇವೆಲ್ಲದರ ಜತೆಗೆ ಆತ್ಮವಿಶ್ವಾಸ ಇದ್ದರೆ ಸ್ತ್ರೀಯರು ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಬಲ್ಲರು ಎಂಬ ಒಟ್ಟಾಭಿಪ್ರಾಯ ‘ವೃತ್ತಿಪರ ಮಹಿಳೆಯರ ಸಬಲೀಕರಣ ಸಮಾವೇಶ’ದಲ್ಲಿ ವ್ಯಕ್ತವಾಯಿತು.
ಟಿಪಿಒ ಕಾನ್‌ಕ್ಲೇವ್ 2024ರ ಭಾಗವಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ವತಿಯಿಂದ ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಅನುಭವಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
‘ಆಧುನಿಕ ಯುಗದಲ್ಲಿ ಉದ್ಯೋಗಾವಕಾಶದ ಬಾಗಿಲುಗಳು ತೆರೆದಿವೆ. ಆದರೂ, ಜಾಗತಿಕ ಮಟ್ಟದ ಅಂಕಿ–ಸಂಖ್ಯೆ ಗಮನಿಸಿದಾಗ ಕಂಪನಿಗಳ ನಿರ್ದೇಶಕ ಸ್ಥಾನಗಳಲ್ಲಿ ಶೇ 20ಕ್ಕಿಂತ ಕಡಿಮೆ ಹಾಗೂ ಸಿಇಒ ಹುದ್ದೆಗಳಲ್ಲಿ ಶೇ 5ಕ್ಕಿಂತ ಕಡಿಮೆ ಮಹಿಳೆಯರು ಇದ್ದಾರೆ. ಯುವ ತಲೆಮಾರಿನ ಹೆಣ್ಣು ಮಕ್ಕಳು ಈ ಚಿತ್ರಣವನ್ನು ಬದಲಾಯಿಸುವ ಭರವಸೆಯಿದೆ’ ಎನ್ನುತ್ತಲೇ ಮಾತು ಆರಂಭಿಸಿದ ವೃತ್ತಿ ಮಾರ್ಗದರ್ಶನ ತರಬೇತುದಾರ್ತಿ ಮ್ಹಾಯಾ ಪಾಯಲ್ ಮಿತ್ರಾ, ತಮ್ಮದೇ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸ್ತ್ರೀಯರು ಮೊಟ್ಟಮೊದಲಿಗೆ ತಮ್ಮದೇ ಆದ ಸುರಕ್ಷಿತ ವಲಯದಿಂದ ಹೊರಬಂದು ಭಿನ್ನವಾಗಿ ಯೋಚಿಸಲು ಆರಂಭಿಸಬೇಕು. ಮದುವೆ, ಹೆರಿಗೆ, ಮಗು ಇವೆಲ್ಲ ಜೀವನ ಭಾಗ. ಈ ಹಂತವನ್ನು ಸಹಜವಾಗಿಯೇ ದಾಟಿ, ಮತ್ತೆ ಗುರಿಯೆಡೆಗೆ ಯೋಚಿಸುವ ಪರಂಪರೆಗೆ ಯುವ ತಲೆಮಾರು ಅಣಿಯಾಗಬೇಕು. ಸೈಬರ್ ಸುರಕ್ಷೆ, ಡಾಟಾ ಸೈನ್ಸ್, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್, ಡಿಜಿಟಲ್ ಮಾರ್ಕೆಟಿಂಗ್ ವಿಶ್ಲೇಷಣೆ, ಕಂಟೆಂಟ್ ಕ್ರಿಯೇಟರ್ ಇಂತಹ ಕ್ಷೇತ್ರಗಳು ಪ್ರಸ್ತುತ ಗರಿಷ್ಠ ಬೇಡಿಕೆಯಲ್ಲಿವೆ ಎನ್ನುತ್ತ ಅವರು ವಿದ್ಯಾರ್ಥಿನಿಯರ ಕಂಗಳಲ್ಲಿ ಕನಸನ್ನು ಬಿತ್ತಿದರು.
ಅಧ್ಯಕ್ಷತೆ ವಹಿಸಿದ್ದ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ರಿಯೊ ಡಿಸೋಜ ಮಾತನಾಡಿ, ‘ಕಾಲೇಜು ದಿನಗಳಲ್ಲಿ ಹೆಚ್ಚು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಶೈಕ್ಷಣಿಕವಾಗಿಯೂ ಸಾಧನೆ ಮಾಡುವ ಯುವತಿಯರು ಮುಂದೆಯೂ ಆ ಛಲ ಉಳಿಸಿಕೊಂಡು ಹೋಗಬೇಕು’ ಎಂದರು. ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಇದ್ದರು. ಅರ್ಜುನ್ ಚೈತನ್ಯ ನಿರೂಪಿಸಿದರು.
ವೆಂಟಾನಾ ವೆಂಚರ್ ಕಂಪನಿಯ ಪಾಲುದಾರಿಕೆ ಹೊಂದಿರುವ ಶೈಲಜಾ ರಾವ್, ಜ್ಯೂಸ್ ಬಾಟಲ್ ಕಂಪನಿಯ ಸ್ಥಾಪಕಿ ಪ್ರೀತಿ ನಾಯಕ್, ಕೋಟ್ಝಿಂಗ್ ಕಂಪನಿಯ ಸಹ ಸಂಸ್ಥಾಪಕಿ ರಂಜಿತಾ ಶೆಟ್ಟಿ ತಮ್ಮ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.