ಮಂಗಳೂರು: ಆಕೆಗೆ ಮದುವೆ ಗೊತ್ತಾಗಿತ್ತು. ಮನೆಯಲ್ಲಿ ಖುಷಿ ತುಂಬಿತ್ತು. ಆದರೆ ರಸ್ತೆ ಅಪಘಾತ ಆಕೆಯ ಪ್ರಾಣವನ್ನೇ ಅಪಹಿರಿಸಿತು. ಅದರೊಂದಿಗೆ ಇಡೀ ಕುಟುಂಬದ ನೆಮ್ಮದಿ ಕಳೆದು ಹೋಯಿತು...
ಕ್ರಿಸ್ ಕ್ರಿಸ್ಟ್ ಕ್ರಾಸ್ತ ತಮ್ಮ ಕುಟುಂಬದಲ್ಲಿ ನಡೆದ ದುರಂತದ ಬಗ್ಗೆ ಹೇಳುತ್ತಿದ್ದಂತೆ ಸಭಿಕರು ಸ್ಥಬ್ದರಾದರು. ವೇದಿಕೆ ಮೇಲೆ ಕುಳಿತವರೂ ಬೇಸರಗೊಂಡರು.
ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ಸಾರಿಗೆ ಇಲಾಖೆ ವತಿಯಿಂದ ಪಿಜಾ ಬೈ ನೆಕ್ಸಸ್‌ನಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಕಣ್ಣೀರ ಕಥೆಯೊಂದಿಗೆ ಅರಿವು ಮೂಡಿಸುವ ಉದ್ದೇಶದಿಂದ ಕ್ರಿಸ್ಟಿ ಬಂದಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಸಹೋದರಿ ಸಾವಿಗೀಡಾದ ವಿಷಯವನ್ನು ನೆನೆದು ತಾಯಿ ಈಗಲೂ ಕಣ್ಣೀರು ಕಾಕುತ್ತಿದ್ದಾರೆ ಎಂದು ಅವರು ಹೇಳಿದರು.
‘ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ, ಇಂಡಿಕೇಟರ್ ಹಾಕುವುದಕ್ಕೆ ಉದಾಸೀನ ಮಾಡಬೇಡಿ. ಎಚ್ಚರ ತಪ್ಪಿದರೆ ನಮ್ಮ ಜೀವ ಮತ್ತು ಜೀವನದೊಂದಿಗೆ ಮತ್ತೊಬ್ಬರ ಕುಟುಂಬವೂ ನೋಯುತ್ತದೆ’ ಎಂದು ಅವರು ಹೇಳಿದರು.
ರೀಮಾ ಮಾತನಾಡಿ ‘ಮಗ ಯಾರಿಗೂ ತಿಳಿಯದೆ ವಾಹನ ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದ. ಮಕ್ಕಳಿಗೆ 25 ವರ್ಷ ಆಗುವ ವರೆಗೆ ವಾಹನ ಕೊಡಬೇಡಿ. ನಂತರ ಕೊಟ್ಟರೂ ಸಾಕಷ್ಟು ಅರಿವು ಮೂಡಿಸಲು ಮರೆಯಬೇಡಿ’ ಎಂದರು.
‘ಕಮಿಷನರೇಟ್‌ನ ಕಾನ್‌ಸ್ಟೆಬಲ್ ಒಬ್ಬರು ಮದುವೆ ಎಂಗೇಜ್‌ಮೆಂಟ್ ಮುಗಿಸಿ ಬರುವಾಗ ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಅವರು ಹೆಲ್ಮೆಟ್ ಧರಿಸಿದ್ದರೂ ಅದರ ಪಟ್ಟಿಯನ್ನು ಬಿಗಿ ಮಾಡಿರಲಿಲ್ಲ. ವಾಹನದಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯವಾಗುತ್ತದೆ’ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.
ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಮಂಗಳೂರಿನಲ್ಲಿ ವಾರಾಂತ್ಯದಲ್ಲಿ ಹೆಚ್ಚುತ್ತಿದ್ದು ಅವರನ್ನು ನಿಯಂತ್ರಿಸಲು ಭಾರಿ ಪ್ರಯತ್ನ ಆಗುತ್ತಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ವರ್ಷ ರಸ್ತೆ ಅಪಘಾತದಲ್ಲಿ 110 ಕುಟುಂಬಗಳು ತಮ್ಮ ಆಪ್ತರನ್ನು ಕಳೆದುಕೊಂಡಿವೆ. ಯುವ ಸಮುದಾಯವೇ ಇದಕ್ಕೆ ಹೆಚ್ಚು ಬಲಿಯಾಗುತ್ತಿವೆ’ ಎಂದು ಅವರು ಹೇಳಿದರು.
‘ಸಂಚಾರ ನಿಯಮಗಳನ್ನು ಪಾಲಿಸುವಂತೆ ನಗರದ ಶಾಲೆ ಮತ್ತು ಕಾಲೇಜುಗಳಲ್ಲಿ ಅರಿವು ಮೂಡಿಸುತ್ತಿದ್ದು ಕಳೆದ ವರ್ಷ 89 ಸಾವಿರ ವಿದ್ಯಾರ್ಥಿಗಳಿಗೆ ‘ಪಾಠ’ ಮಾಡಲಾಗಿದೆ’ ಎಂದರು.
ಅತಿಥಿಯಾಗಿದ್ದ ನಟ ಅರವಿಂದ ಬೋಳಾರ್ ಮಾತನಾಡಿ ‘ರಸ್ತೆಯಲ್ಲಿ ಆಗುವ ಪ್ರತಿ ಅಪಘಾತಗಳಿಗೆ ನಾವೇ ಕಾರಣ. ಆದ್ದರಿಂದ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು, ನಮ್ಮ ಜೀವ ಉಳಿಸಿಕೊಂಡು ಇತರರನ್ನೂ ಕಾಪಾಡಬೇಕು’ ಎಂದರು.
‘ಸಂಚಾರ ನಿಯಮ ಉಲ್ಲಂಘನೆ ತಡೆಯಲು ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕು. ತಪ್ಪಿತಸ್ಥರ ವಿಡಿಯೊ ಮಾಡಿ ಪೊಲೀಸರಿಗೆ ತಲುಪಿಸಲು ಮುಂದಾಗಬೇಕು. ಪಾಲಕರು ಸಣ್ಣ ಮಕ್ಕಳಿಗೆ ವಾಹನದ ರುಚಿ ಹಚ್ಚಿಸಬೇಡಿ’ ಎಂದು ಅವರು ಸಲಹೆ ನೀಡಿದರು.
ಸೇಂಟ್ ಆ್ಯಗ್ನೆಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಕಿರು ಪ್ರಹಸನದ ಮೂಲಕ ಜಾಗೃತಿ ಮೂಡಿಸಿದರು. ಸಂಚಾರ ನಿಯಂತ್ರಣಕ್ಕೆ ನೆರವಾಗುತ್ತಿರುವ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್, ರೋಷನ್ ರಾಯ್ ಸಿಕ್ವೇರ, ಸುನಿಲ್ ಜೆ. ಡಿಸೋಜ ಮತ್ತು ರಮೇಶ್ ಕಾವೂರು ಅವರನ್ನು ಗೌರವಿಸಲಾಯಿತು.
ಪ್ರಾದೇಶಿಕ ಸಾರಿಗೆ ಉಪ ಆಯುಕ್ತ ಶ್ರೀಧರ್ ಕೆ.ಮಲ್ಲಾಡ್, ಡಿಸಿಪಿಗಳಾದ ರವಿಶಂಕರ್, ಸಿದ್ಧಾರ್ಥ ಗೋಯಲ್, ಉಮೇಶ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಪಿಜಾ ಬೈ ನೆಕ್ಸಸ್ ಸಹಾಯಕ ವ್ಯವಸ್ಥಾಪಕ ಸುನಿಲ್ ಕೆ.ಎಸ್ ಪಾಲ್ಗೊಂಡಿದ್ದರು.
ಸಂಚಾರ ನಿಯಮಗಳ ಕುರಿತ ಘೋಷಣಾ ಪಲಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಯಿತು. ಎಸಿಪಿ ನಜ್ಮಾ ಫಾರೂಖಿ ಪಿಜಾ ಬೈ ನೆಕ್ಸಸ್‌ನ ಸುನಿಲ್ ಕೆ.ಎಸ್ ಡಿಸಿಪಿ ರವಿಶಂಕರ್ ನಟ ಅರವಿಂದ ಬೋಳಾರ್ ಕಮಿಷನರ್ ಅನುಪಮ್ ಅಗ್ರವಾಲ್ ಡಿಡಿಪಿ ಸಿದ್ಧಾರ್ಥ ಗೋಯಲ್ ಸಾರಿಗೆ ಅಧಿಕಾರಿ ಶ್ರೀಧರ್ ಕೆ.ಮಲ್ಲಾಡ್ ಮತ್ತು ಡಿಸಿಪಿ ಉಮೇಶ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.