ADVERTISEMENT

ಜಲ ಯೋಜನೆ: ಮುಂಚೂಣಿಯಲ್ಲಿ ಕರ್ನಾಟಕ

ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗೆ ಗರಿಷ್ಠ ಅಧಿಕಾರ: ಸಿಇಒ ಆನಂದ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:32 IST
Last Updated 17 ಜೂನ್ 2025, 13:32 IST
ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕುರಿತು ಮಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾ ಪ್ರಾಕ್ಟೀಸ್ ಮ್ಯಾನೇಜರ್ ಸುಮಿಲಾ ಗಲ್ಯಾನಿ ಮಾತನಾಡಿದರು : ಪ್ರಜಾವಾಣಿ ಚಿತ್ರ
ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕುರಿತು ಮಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾ ಪ್ರಾಕ್ಟೀಸ್ ಮ್ಯಾನೇಜರ್ ಸುಮಿಲಾ ಗಲ್ಯಾನಿ ಮಾತನಾಡಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದಂತೆ ಗ್ರಾಮೀಣ ಪ್ರದೇಶಗಳಲ್ಲಿ 24X7 ನೀರು ಪೂರೈಕೆ ಮಾಡುವಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ, ನೀರು ನಿರ್ವಹಣಾ ವ್ಯವಸ್ಥೆ, ಸಂಸ್ಥೆಗಳ ಸಮರ್ಪಣಾ ಮನೋಭಾವ ಪ್ರಮುಖ ಪಾತ್ರ ವಹಿಸಲಿವೆ ಎಂದು ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾ ಪ್ರಾಕ್ಟೀಸ್ ಮ್ಯಾನೇಜರ್ ಸುಮಿಲಾ ಗುಲ್ಯಾನಿ ಅಭಿಪ್ರಾಯಪಟ್ಟರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕುರಿತು ಅನುಷ್ಠಾನ ಅಧಿಕಾರಿಗಳಿಗಾಗಿ ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಶ್ವಬ್ಯಾಂಕ್ ನೆರವಿನಲ್ಲಿ ಕರ್ನಾಟಕದಲ್ಲಿ ₹10 ಸಾವಿರ ಕೋಟಿ ವೆಚ್ಚದ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಅವುಗಳಲ್ಲಿ ₹3,000 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಯೂ ಒಳಗೊಂಡಿದೆ. ನೀರು ಪೂರೈಕೆಯಲ್ಲಿ ಯೋಜನೆಯಲ್ಲಿ ಕರ್ನಾಟಕವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ ಮಾತನಾಡಿ, ನಗರದಲ್ಲಿ ಇರುವಂತೆ ಗ್ರಾಮೀಣ ಭಾಗಗಳಲ್ಲೂ 24X7 ನೀರು ಸರಬರಾಜು ಮಾಡುವ ಉದ್ದೇಶದಿಂದ ಜಲ್‌ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಸೇವೆ ಆಧರಿತ ಯೋಜನೆ ಇದಾಗಿದ್ದು, ಗ್ರಾಮ ಪಂಚಾಯಿತಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯ ಪಾತ್ರ ಮಹತ್ವದ್ದಾಗಿದೆ ಎಂದರು.

ನೀರಿನ ಮೂಲ ಬಲಗೊಳಿಸುವಿಕೆ, ನೀರಿನ ಲಭ್ಯತೆ, ಮೂಲ ಸೌಕರ್ಯ, ಜಲಮೂಲದ ಸ್ವಚ್ಛತೆ, ನೀರಿನ ಪರೀಕ್ಷೆ ಹಾಗೂ ಮರುಪೂರಣ ಇವೆಲ್ಲವುಗಳ ಹೊಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಪಂಚಾಯಿತಿಯ ನೀರು ಮತ್ತು ನೈರ್ಮಲ್ಯ ಸಮಿತಿಗೆ ಹೆಚ್ಚಿನ ಅಧಿಕಾರ ದೊರೆಯಲಿದ್ದು, ಬಳಕೆದಾರರಿಗೆ ನೀಡುವ ನೀರಿನ ಪ್ರಮಾಣ, ಅದಕ್ಕೆ ವಿಧಿಸುವ ಶುಲ್ಕವನ್ನು ಸಹ ಸಮಿತಿಯೇ ನಿರ್ಧರಿಸಲಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ಪ್ರದೇಶವಾರು ಭಿನ್ನ ಸಮಸ್ಯೆಗಳು ಇರುವ ಕಾರಣ ಪ್ರಾದೇಶಿಕವಾಗಿ ಯೋಜನೆ ರೂಪಿಸಲಾಗಿದೆ. ಮುಂದಿನ 30 ವರ್ಷಗಳ ದೂರದರ್ಶಿತ್ವದ ಯೋಜನೆ ಇದಾಗಿದೆ ಎಂದರು.

ನೀರು ಮತ್ತು ನೈರ್ಮಲ್ಯ ತಜ್ಞೆ ಅರೋಹ ಬಹುಗುಣ, ಕ್ರಿಯಾ ತಂಡದ ನಾಯಕರಾದ ಮರಿಯಪ್ಪ ಕುಲ್ಲಪ್ಪ, ಕ್ರಿಸ್ಟೋಫರ್ ವೆಲ್ಸನ್, ಉಡುಪಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಎಂಜಿನಿಯರ್ ಎನ್.ಡಿ. ರಘುನಾಥ ಸ್ವಾಗತಿಸಿದರು. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ (ಆಡಳಿತ) ಉಪ ಕಾರ್ಯದರ್ಶಿ ಜಾಫರ್ ಶರೀಫ್ ಸುತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿ ತಿಂಗಳು ನೀರಿನ ಬಿಲ್‌ ನೀಡಿ:

ವಿದ್ಯುತ್‌ ಮೀಟರ್‌ನಂತೆ ನೀರಿನ ಮೀಟರ್‌ಗಳನ್ನು ಅಳವಡಿಸಿ ಬಳಕೆದಾರರಿಗೆ ಪ್ರತಿ ತಿಂಗಳು ವಿದ್ಯುತ್ ಬಿಲ್‌ನಂತೆ ನೀರಿನ ಬಿಲ್‌ ನೀಡಿ ಶುಲ್ಕ ಸಂಗ್ರಹಿಸುವ ಕ್ರಮ ಜಾರಿಗೊಳ್ಳಬೇಕು. ಆಗ ವ್ಯವಸ್ಥೆಗೆ ಶಿಸ್ತು ಬರುವ ಜೊತೆಗೆ ನೀರಿನ ಲಭ್ಯತೆ ಮತ್ತು ಬೇಡಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಂಬಂಧ ಪ್ರತ್ಯೇಕ ದಾಖಲೆ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.