ಉಳ್ಳಾಲ: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತುಳು ಭಾಷಾ ಹಾಡುಗಳನ್ನು ಕಲಿಸಲು ಅಕಾಡೆಮಿ ವತಿಯಿಂದ ‘ಡೆನ್ನ ಡೆನ್ನಾನ-ಪದ ಪನ್ಕನ’ ಮತ್ತು ‘ತುಳು ಓದುಗ’ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯ ಸಹಯೋಗದಲ್ಲಿ ಶುಕ್ರವಾರ ಆನಂದಾಶ್ರಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆದು, ವಿವಿಧ ಉತ್ಸವಗಳ ವೇದಿಕೆಗಳಲ್ಲಿ ಹಾಡು ಹೇಳಲು ಅವಕಾಶ ಲಭಿಸುವ ಜತೆಗೆ ತುಳು ಭಾಷೆಯ ಮೇಲೆ ಪ್ರೀತಿ ಹೆಚ್ಚಿಸುವ ಕಾರ್ಯವನ್ನು ಅಕಾಡೆಮಿ ಮೂಲಕ ಮಾಡಲಾಗುತ್ತಿದೆ. ಮಕ್ಕಳು ಕಲಿತು ವಿದೇಶಕ್ಕೆ ಹೋದರೆ ಬೇರೆ ಭಾಷೆಗಳನ್ನ ಕಲಿಯುವುದು ಇಂದಿನ ಅಗತ್ಯ ಮತ್ತು ಅನಿವಾರ್ಯತೆ. ಆದರೂ ತಾಯಿ ಭಾಷೆಯನ್ನು ಎಂದಿಗೂ ಮರೆಯಬಾರದು. ತುಳು ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ಯುವ ಪೀಳಿಗೆಯದ್ದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದೆ ರೂಪಶ್ರೀ ವರ್ಕಾಡಿ ಮಾತನಾಡಿ, ತಾಯಿ ಭಾಷೆ ತುಳುವಿನ ಮೇಲೆ ಎಲ್ಲರೂ ಅಪಾರವಾದ ಪ್ರೀತಿ ಇಟ್ಟಿದ್ದಾರೆ. ಭಾಷೆಯ ಉಳಿವಿಗಾಗಿ ತುಳು ಸಾಹಿತ್ಯ ಅಕಾಡೆಮಿ, ತುಳು ಚಿತ್ರರಂಗ ಮತ್ತು ರಂಗಭೂಮಿ ಶ್ರಮ ಪಟ್ಟಿದೆ ಎಂದರು.
ಸಂಗೀತ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್, ಸಂಗೀತ ಶಿಕ್ಷಕಿ ವಾಣಿ ಸಪ್ರೆ ಅವರು ಸಂಪನ್ಮೂಲ ಕಲಾವಿದರಾಗಿ ಭಾಗವಹಿಸಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರ್ಮಿಸಿದ, ದಿನೇಶ್ ಅತ್ತಾವರ ನಿರ್ದೇಶನದ ಜಾಗ್‌ರ್ತೆ..!? ತುಳು ನಾಟಕ ಪ್ರದರ್ಶಿಸಲಾಯಿತು.
ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಆನಂದಾಶ್ರಮ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ, ಕೊಲ್ಯ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಶೆಟ್ಟಿ, ಯಕ್ಷಗಾನ ಕಲಾವಿದ ಕುಸುಮಾಕರ ಕುಂಪಲ, ಶಾಲಾ ಮುಖ್ಯಶಿಕ್ಷಕ ಗುರುಮೂರ್ತಿ ಪಿ. ಭಾಗವಹಿಸಿದ್ದರು.
ಶಿಕ್ಷಕರಾದ ಪ್ರದೀಪ್ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ್ ಶೆಣೈ ವಂದಿಸಿದರು. ಗಣೇಶ್ ಕೆ.ನಿರೂಪಿಸಿದರು.
ಅಕಾಡೆಮಿಯ ಕಚೇರಿಯಲ್ಲಿ ‘ತುಳು ಓದುಗ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತುಳುವಲ್ಲಿ ಅಂಥದ್ದೇನಿದೆ ಎಂದು ಅಂತ ಕೇಳುವವರಿದ್ದಾರೆ. ತುಳುವಲ್ಲಿ ಏನೇನಿಲ್ಲ ಎಂಬುದನ್ನು ಜನರಿಗೆ ತೋರಿಸಿ ಕೊಡುವ ಪ್ರಯತ್ನ ನಮ್ಮದಾಗಿದೆ. ಅಕಾಡೆಮಿಯಲ್ಲಿ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ, ವಿವಿಧ ಸಾಹಿತ್ಯ ಪ್ರಕಾರಗಳು ಸೇರಿದಂತೆ ಸುಮಾರು ಐದು ಸಾವಿರ ತುಳು ಗ್ರಂಥಗಳ ಭಂಡಾರವಿದೆ. ಇಲ್ಲಿಗೆ ತುಳು ಓದಲು ಬರುವ ವಿದ್ಯಾರ್ಥಿಗಳಿಗೆ ಲಘು ಉಪಾಹಾರ, ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶಾಲಾ-ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳನ್ನ ಅಕಾಡೆಮಿಗೆ ಕಳುಹಿಸಿ ತುಳು ಉಳಿಸುವ ಅಭಿಯಾನಕ್ಕೆ ಕೈಜೋಡಿಸಬೇಕಿದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.